ರಾಜ್ಯ

ಬಸ್‌ನಲ್ಲಿನ ದೋಷದಿಂದ ಪ್ರಯಾಣಿಕರು ಗಾಯಗೊಂಡರೆ ಪರಿಹಾರ ನೀಡಿ: ಕೆಎಸ್‌ಆರ್‌ಟಿಸಿಗೆ ಹೈಕೋರ್ಟ್

Manjula VN

ಬೆಂಗಳೂರು: ಬಸ್ ನಲ್ಲಿನ ದೋಷದಿಂದ ಪ್ರಯಾಣಿಕರು ಗಾಯಗೊಂಡರೆ ಪರಿಹಾರ ನೀಡುವಂತೆ ಕೆಎಸ್‌ಆರ್‌ಟಿಸಿಗೆ ಹೈಕೋರ್ಟ್ ಶನಿವಾರ ಸೂಚನೆ ನೀಡಿದೆ.

ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುಂತನಹಳ್ಳಿ ಗ್ರಾಮದ ಪಿ ಚಂದ್ರಪ್ರಭಾ ಅವರು ಮೋಟಾರು ವಾಹನ ಅಪಘಾತ ನ್ಯಾಯಾಧಿಕರಣದ ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರು ಪುರಸ್ಕರಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯಿಂದಾಗಿ ಸರ್ಕಾರಿ ಪ್ರಾಥಮಿಕ ಶಾಲೆಯ 30 ವರ್ಷದ ಶಿಕ್ಷಕಿ ಚಂದ್ರಪ್ರಭಾ ಅವರು ತಮ್ಮ ಬಲಗಾಲಿನ ಮೂಳೆ ಮುರಿತಕ್ಕೆ ಒಳಗಾಗಿ 12 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಕರಣ ಸಂಬಂಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಲ್ಲಿ ಚಾಲಕ ತಪ್ಪಿತಸ್ಥರಲ್ಲ ಎಂದು ಪೊಲೀಸರು ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿದ ಚಂದ್ರಪ್ರಭಾ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಚಂದ್ರಪ್ರಭಾ ಅವರ ಅರ್ಜಿಯನ್ನು ನ್ಯಾಯಾಧಿಕರಣ ವಜಾಗೊಳಿಸಿತ್ತು, ನಂತರ ಚಂದ್ರಪ್ರಭಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿಯನ್ನು ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರು ಪುರಸ್ಕರಿಸಿದ್ದು, ಅರ್ಜಿದಾರರು ಇಲ್ಲಿಯವರಗೆ ವಾರ್ಷಿಕ ಶೇ.6 ಬಡ್ಡಿಯೊಂದಿಗೆ ರೂ.1.30,000 ಪರಿಹಾರ ಪಡೆದುಕೊಳ್ಳುಲು ಅರ್ಹರಾಗಿದ್ದಾರೆಂದ ಹೇಳಿದ್ದು, ನ್ಯಾಯಾಧಿಕರಣದ ಆದೇಶವನ್ನು ರದ್ದುಗೊಳಿಸಿದರು. ಅಲ್ಲದೆ, ಬಸ್ ನಲ್ಲಿನ ದೋಶದಿಂದ ಪ್ರಯಾಣಿಕರೊಬ್ಬರಿಗೆ ಗಾಯಗಳಾದರೆ ಪರಿಹಾರ ನೀಡುವಂತೆ ಸಾರಿಗೆ ನಿಗಮಕ್ಕೆ ಸೂಚಿಸಿದರು.

ಅರ್ಜಿದಾರರಾಗಿರುವ ಚಂದ್ರಪ್ರಭಾ ಅವರು 2012ರ ಆಗಸ್ಟ್ 22 ರಂದು ಸಂಜೆ 5.30 ಗಂಟೆಗೆ ಕೆಲಸ ಮುಗಿಸಿ ಹೆಚ್.ಡಿ.ಕೋಟೆಯಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದರು. ಚಾಲಕನು ಬಸ್ ಅನ್ನು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದನು. ಈ ವೇಳೆ ಇದ್ದಕ್ಕಿದ್ದಂತೆ ಬಸ್‌ನ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಬಸ್ ನ್ನು ನಿಲ್ಲಿಸಲಾಗಿದ್ದು, ಪ್ರಯಾಣಿಕರು ಇಳಿಯಲು ಆರಂಭಿಸಿದ್ದಾರೆ. ಈ ವೇಳೆ ಚಾಲಕ ಇದ್ದಕ್ಕಿದ್ದಂತೆ ಬಸ್ ಚಾಲನೆಯನ್ನು ಆರಂಭಿಸಿದ್ದಾರೆ. ಪರಿಣಾಮ ಚಂದ್ರಪ್ರಭಾ ಅವರು ಬಿದ್ದಿದ್ದಾರೆ. ಇದರಿಂದ ಬಲಗಾಲಿನ ಮೂಳೆ ಮುರಿತಗೊಂಡಿದೆ.

SCROLL FOR NEXT