ರಾಜ್ಯ

ಗದಗ ವಿದ್ಯಾರ್ಥಿ ಹತ್ಯೆ ಪ್ರಕರಣ: ಶಿಕ್ಷಕ ಮುತ್ತಪ್ಪ ಹಡಗಲಿ ಬಂಧನ; ಇಬ್ಬಿಬ್ಬರ ಜೊತೆಗೆ ಅಮ್ಮನ ಸಲುಗೆ ಮಗನಿಗೆ ಮುಳುವು!

Shilpa D

ಗದಗ: ಮೂವರು ವಿವಾಹಿತ ಶಿಕ್ಷರ ಪ್ರೀತಿಗೆ ಅಮಾಯಕ ವಿದ್ಯಾರ್ಥಿ ಬಲಿ ಆಗಿದ್ದಾನೆ. ಇಬ್ಬಿಬ್ಬರ ಜೊತೆಗೆ ಅಮ್ಮನ ಸಲುಗೆ ಮಗನಿಗೆ ಮುಳುವಾಗಿದೆ. ಅಮ್ಮನೊಂದಿಗೆ ಸಲುಗೆಯಿಂದಿದ್ದ ಇಬ್ಬರು ಶಿಕ್ಷಕರ ಪೈಕಿ ಒಬ್ಬ ಆಕೆಯ ಮಗನನ್ನು ಭೀಕರವಾಗಿ ಕೊಲೆ ಮಾಡಿ ಕ್ರೌರ್ಯ ತೋರಿದ್ದಾನೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನರಗುಂದ ತಾಲ್ಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ನನ್ನು ಹತ್ಯೆ ಮಾಡಿ, ಅತಿಥಿ ಶಿಕ್ಷಕಿ ಗೀತಾ ಬಾರಕೇರ ಹಾಗೂ ಸಹಶಿಕ್ಷಕ ಸಂಗನಗೌಡ ಪಾಟೀಲ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದರೆ.

ಆರೋಪಿ ಮುತ್ತಪ್ಪ ನರಗುಂದ ಪಟ್ಟಣ ಸಮೀಪ ಇರುವ ರೋಣ ಕ್ರಾಸ್‌ ಬಳಿ ಮಂಗಳವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಮುತ್ತಪ್ಪ ಹಡಗಲಿ ಹಾಗೂ ಗೀತಾ ಬಾರಕೇರ ಅವರ ನಡುವೆ ಮೊದಲಿನಿಂದಲೂ ಸಲುಗೆ ಇತ್ತು. ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಗೀತಾ ಬಾರಕೇರ ಸಹ ಶಿಕ್ಷಕ ಸಂಗನಗೌಡ ಪಾಟೀಲ ಜತೆಗೆ ಆಪ್ತವಾಗಿ ನಡೆದುಕೊಂಡಿದ್ದು, ಇವರಿಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿದ್ಯಾರ್ಥಿ ಸಾವಿಗೆ ಕಾರಣನಾದ ಆರೋಪಿ ಮುತ್ತಪ್ಪನನ್ನು ಬಂಧಿಸಲಾಗಿದೆ. ಆತನನ್ನು ವಿಚಾರಿಸಲಾಗಿ, ಗೀತಾ ಮತ್ತು ನನ್ನ ನಡುವೆ ಸಲುಗೆ ಇತ್ತು ಎಂದು ತಿಳಿಸಿದ್ದಾನೆ. ಅಲ್ಲದೇ, ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಆಕೆ ಸಹ ಶಿಕ್ಷಕನೊಂದಿಗೆ ಆಪ್ತವಾಗಿ ನಡೆದುಕೊಂಡಿದ್ದು ಸಿಟ್ಟು ತರಿಸಿತ್ತು. ಈ ಕಾರಣದಿಂದಲೇ, ಗೀತಾಗೆ ಸಂಬಂಧಪಟ್ಟವರು ಯಾರೇ ಸಿಕ್ಕರೂ ಹೊಡೆದು ಹಾಕಬೇಕು ಎಂದು ನಿರ್ಧರಿಸಿದ್ದಾಗಿ ಆರೋಪಿ ತಿಳಿಸಿದ್ದಾನೆ’ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

SCROLL FOR NEXT