ರಾಜ್ಯ

ಪಂಚಮಸಾಲಿಗಳ ವಿರಾಟ್ ಪಂಚಶಕ್ತಿ ಸಮಾವೇಶ: ಸುವರ್ಣಸೌಧದತ್ತ ಸಾಗಿದ ಬೃಹತ್ ಪಾದಯಾತ್ರೆ

Manjula VN

ಹಿರೇಬಾಗೇವಾಡಿ (ಬೆಳಗಾವಿ): ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿ ವಿರಾಟ್ ಪಂಚಶಕ್ತಿ ಸಮಾವೇಶ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ಭಾರೀ ಪ್ರಮಾಣದ ಜನರು ಸೇರಿದ್ದಾರೆ.

ಬುಧವಾರ ಬೈಲಹೊಂಗಲದ ರಾಣಿ ಚನ್ನಮ್ಮ ಸಮಾಧಿ ಸ್ಥಳದಿಂದ ಆರಂಭವಾದ ಪಾದಯಾತ್ರೆ ಹಿರೇಬಾಗೇವಾಡಿ ತಲುಪಿ, ಗುರುವಾರ ಮತ್ತೆ ಸುವರ್ಣ ಸೌಧದ ಕಡೆಗೆ ಹೊರಟಿತು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ, ಎ.ಬಿ.ಪಾಟೀಲ ಸೇರಿದಂತೆ ಹಲವು ಮುಖಂಡರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಸಮಾವೇಶಕ್ಕಾಗಿ ಸುವರ್ಣ ವಿಧಾನಸೌಧದಿಂದ 5 ಕಿ.ಮೀ ದೂರದ ಬಸ್ತವಾಡ- ಕಮಕಾರಟ್ಟಿ ಮಧ್ಯದಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ.

ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯ ಜನರು ಸ್ಥಳವನ್ನು ಸೇರಿದ್ದಾರೆ. ಪಾದಯಾತ್ರೆ ಈ ವೇದಿಕೆ ತಲುಪುವವರೆಗೂ ಚನ್ನಮ್ಮ, ರಾಯಣ್ಣನ ಶೌರ್ಯಗಳ ಕ್ರಾಂತಿಗೇತೆಗಳ ಗಾಯನ ನಡೆದಿದೆ.

ಮತ್ತೊಂದೆಡೆ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದು, ಇಂದು ಬೆಳಗ್ಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ.

ಈ ನಡುವೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿಯವರು, ಕಾನೂನು ಸಂಸದರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಪಂಚಮಸಾಲಿ ಬೇಡಿಕೆ ನ್ಯಾಯಸಮ್ಮತ ಎಂದು ತಿಳಿಸಿದ್ದಾರೆ.

ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಉತ್ಸುಕರಾಗಿದ್ದು, ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಪಂಚಮಸಾಲಿ ಪೀಠಾಧಿಪತಿಗೆ ನನ್ನ ಮೇಲೆ ಯಾವುದೇ ಕೋಪವಿಲ್ಲ ಎಂದರು.

SCROLL FOR NEXT