ರಾಜ್ಯ

ವೋಟರ್ ಐಡಿ ಪರಿಷ್ಕರಣೆ ಹಗರಣ: ಚಿಲುಮೆ ಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಿ ಬಿಬಿಎಂಪಿ ಆದೇಶ

Shilpa D

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಮಾಹಿತಿ ಕಳವು ಮಾಡಿರುವ ಆರೋಪದಲ್ಲಿ ತನಿಖೆ ಎದುರಿಸುತ್ತಿರುವ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಮತದಾನದ ಬಗ್ಗೆ ಜಾಗೃತಿಗಾಗಿ ಬಿಬಿಎಂಪಿ ನೀಡಿದ್ದ ಒಪ್ಪಿಗೆ ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಸದ್ಯ ರಾಜ್ಯ ಚುನಾವಣಾ ಆಯೋಗ ಚಿಲುಮೆ ಸಂಸ್ಥೆಯ ವಿರುದ್ದ ತನಿಖೆ ನಡೆಸುತ್ತಿದೆ. ಚಿಲುಮೆ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿದ್ದರಿಂದ ಮುಂದಿನ ದಿನಗಳಲ್ಲಿ ಯಾವುದೆ ಕಾರ್ಯಕ್ರಮ ಹಾಗೂ ಟೆಂಡರ್​ಗಳನ್ನು ಸಂಸ್ಥೆಗೆ ನೀಡದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ

ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಕಳವು ಪ್ರಕರಣದ ಸಂಬಂಧ ಚಿಲುವೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿರುದ್ಧ ಹಲಸೂರುಗೇಟ್‌ ಮತ್ತು ಕಾಡುಗೋಡಿ ಪೊಲೀಸ್‌ ಠಾಣೆಗಳಲ್ಲಿ ಬಿಬಿಎಂಪಿ ದೂರು ದಾಖಲಿಸಿತ್ತು. ಮತದಾರರ ಪಟ್ಟಿವಿಶೇಷ ಪರಿಷ್ಕರಣೆ 2023 ಕಾರ್ಯಚಟುವಟಿಕೆಗಳ ಕುರಿತು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಶೈಕ್ಷಣಿಕ ಸಾಂಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಷರತ್ತುಬದ್ಧ ಅನುಮತಿಯನ್ನು ಬಿಬಿಎಂಪಿ ನೀಡಿತ್ತು.

28 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಜೋಡಣೆಯನ್ನು ವಿಎಚ್‌ಎ(ವೋಟರ್ ಹೆಲ್ಪ್‌ಲೈನ್ ಆ್ಯಪ್‌) ಮೂಲಕ ಮಾಡಲು ಮತ್ತು ಮತದಾರರಲ್ಲಿ ಅರಿವು ಮೂಡಿಸಲು ಅನುಮತಿ ನೀಡಲಾಗಿತ್ತು.

SCROLL FOR NEXT