ರಾಜ್ಯ

ಸೋತ ಅಭ್ಯರ್ಥಿಗೂ ಅನುದಾನ: ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಪ್ರತಿಭಟನೆ

Shilpa D

ಬೆಳಗಾವಿ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ತಮ್ಮ ಹಕ್ಕುಚ್ಯುತಿ ಆಗಿದೆ ಎಂದು ಆರೋಪಿಸಿ ಸ್ಥಳೀಯ ಶಾಸಕ ಟಿ.ಡಿ. ರಾಜೇಗೌಡ ಅವರು ಸದನದ ಬಾವಿಗಿಳಿದು ಪ್ರತಿಭಟಿಸಿದರು.

ಸದನದಲ್ಲಿ ಈ ವಿಷಯ ಪ್ರಸ್ತಾವಿಸಿದ ರಾಜೇಗೌಡ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಎಂದು ಸೋತ ಅಭ್ಯರ್ಥಿ ಜೀವರಾಜ್‌ ಹೆಸರನ್ನು ಸರಕಾರದ ಆದೇಶದಲ್ಲಿ ನಮೂದಿಸಲಾಗಿದೆ. ಇದರಿಂದ ನನ್ನ ಹಕ್ಕುಚ್ಯುತಿ ಆಗಿದೆ. ನಾನು ಶಾಸಕ ಹೌದೋ, ಅಲ್ಲವೋ ಅನ್ನುವುದು ತೀರ್ಮಾನ ಆಗಿಲ್ಲ. ನನಗಾಗಿರುವ ಅನ್ಯಾಯ ಸರಿಪಡಿಸದಿದ್ದರೆ ಸದನದಲ್ಲಿ ಉಪವಾಸ ಕುಳಿತುಕೊಳ್ಳುತ್ತೇನೆಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನ್ಯಾಯ ಕೊಡಬೇಕೆಂದು ಧರಣಿ ನಡೆಸಿದರು. ಇದಕ್ಕೆ ಶಾಸಕ ರಂಗನಾಥ್‌ ಸಾಥ್‌ ನೀಡಿದ್ದರು. ನನ್ನ ಕ್ಷೇತ್ರಕ್ಕೆ ಬರಬೇಕಿದ್ದ ಸುಮಾರು 15 ಕೋಟಿ ರೂ. ಶಿಕಾರಿಪುರಕ್ಕೆ ಹೋಗಿದೆ ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸೋತ ಅಭ್ಯರ್ಥಿಗೆ ಹಣ ಹಂಚಿಕೆ ಮಾಡಿರುವುದು ಕೆಟ್ಟ ನಿದರ್ಶನ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. "ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಬಿಜೆಪಿ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ವಿಧಾನಸಭೆಯ ಎಲ್ಲಾ ಶಾಸಕರ ಘನತೆ ಮತ್ತು ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು" ಎಂದರು.

ಶೃಂಗೇರಿಗೆ ಅನುದಾನ ನೀಡುವಾಗ ಜೀವರಾಜ್‌ ಅವರ ಹೆಸರು ಉಲ್ಲೇಖಿಸಿರುವುದು ಸರಿಯಲ್ಲ. ಜೀವರಾಜ್ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಒಂದು ಕೆಟ್ಟ ಸಂಪ್ರದಾಯ, ಅದು ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ" ಎಂದು ಹೇಳಿದರು.

ಇದು ಸವಲತ್ತು ಉಲ್ಲಂಘನೆ ಆಗುವುದಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಮಜಾಯಿಷಿ ನೀಡಲು ಮುಂದಾದಾಗ ರಾಜೇಗೌಡ ಹಾಗೂ ಕುಣಿಗಲ್ ಶಾಸಕ ಡಿ.ಆರ್.ರಂಗನಾಥ್ ಸದನದ ಬಾವಿಗೆ ನುಗ್ಗಿ ಧರಣಿ ನಡೆಸುವುದಾಗಿ ಬೆದರಿಕೆ ಹಾಕಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಶಿಷ್ಟಾಚಾರ ಉಲ್ಲಂಘಿಸಿರುವ ಬಗ್ಗೆ ಯಾವುದೇ ಪುರಾವೆ ನೀಡಿಲ್ಲ ಮತ್ತು ತಮ್ಮ ಸ್ಥಾನಕ್ಕೆ ಹಿಂತಿರುಗುವಂತೆ ಕೇಳಿಕೊಂಡರು.

SCROLL FOR NEXT