ರಾಜ್ಯ

'ಸೀಟ್ ಬೆಲ್ಟ್ ಧರಿಸಿದ್ದೆವು, ಹಾಗಾಗಿ ಬದುಕುಳಿದೆವು, ಕಾರಿನಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ': ಪಿಎಂ ಮೋದಿ ಸೋದರ ಪ್ರಹ್ಲಾದ್ ಮೋದಿ

Sumana Upadhyaya

ಮೈಸೂರು: ಮೈಸೂರು ಜಿಲ್ಲೆಯ ಕಡಕೋಳ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸೋದರ ಪ್ರಹ್ಲಾದ್ ಮೋದಿ ಅವರು ತಮ್ಮ ಮಗ ಮತ್ತು ಸೊಸೆಯ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಇದೀಗ ಗುಣಮುಖರಾಗಿದ್ದು ಸದ್ಯದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ.

ಪ್ರಹ್ಲಾದ್ ಮೋದಿ ಅವರು ನಿನ್ನೆ ಬೆಳಗ್ಗೆ ಬೆಂಗಳೂರಿನಿಂದ ಬಂಡೀಪುರಕ್ಕೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಖಾಸಗಿ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಕಡಕೋಳ ಕೈಗಾರಿಕಾ ಪ್ರದೇಶದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. 
ಕಾರಿನಲ್ಲಿ ಪ್ರಹ್ಲಾದ್ ಮೋದಿ, ಅವರ ಮಗ, ಸೊಸೆ, ಮೊಮ್ಮಗ ಮತ್ತು ಚಾಲಕ ಇದ್ದರು. ಗಾಯಗೊಂಡಿದ್ದ ಅವರನ್ನು ಕೂಡಲೇ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 

ಕಾರಿನ ಬಲಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇಂದು ಪ್ರಹ್ಲಾದ್ ಮೋದಿಯವರು ಆಸ್ಪತ್ರೆಯ ವೈದ್ಯರೊಂದಿಗೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಇಂದು ಕಾರಿನಲ್ಲಿ ಪ್ರಯಾಣಿಸುವಾಗ ನಮ್ಮ ಸುರಕ್ಷತೆಗೆ ತಂತ್ರಜ್ಞಾನಗಳು ಬಂದಿವೆ. ಸೀಟ್ ಬೆಲ್ಟ್ ಇದೆ. ನಿನ್ನೆ ಅಪಘಾತ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸಿದ್ದರಿಂದ ನಾನು ಬದುಕುಳಿದಿದ್ದೆ. ಹಾಗಾಗಿ ನಾನು ಎಲ್ಲರನ್ನೂ ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಸುದ್ದಿ ತಿಳಿದ ತಕ್ಷಣ ಪ್ರಧಾನಿ ಮೋದಿಯವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅವರು ಕೆಲಸದ ಒತ್ತಡದಲ್ಲಿದ್ದಾರೆ. ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ, ಗಾಬರಿಪಡುವ ಅಗತ್ಯವಿಲ್ಲ ಎಂದು ಅವರಿಗೆ ಹೇಳಿದ್ದೇನೆ ಎಂದು ಪ್ರಹ್ಲಾದ್ ಮೋದಿ ಹೇಳಿದರು.

SCROLL FOR NEXT