ರಾಜ್ಯ

ಕೊಡಗಿನ ನಾಗರಹೊಳೆ ಮೀಸಲು ಅರಣ್ಯದಲ್ಲಿ ಭಾರತೀಯ ಕಾಡೆಮ್ಮೆಯನ್ನು ಗುಂಡಿಕ್ಕಿ ಕೊಂದ ಕಿಡಿಗೇಡಿಗಳು!

Manjula VN

ಮಡಿಕೇರಿ: ಕೊಡಗು ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಭಾರತೀಯ ಕಾಡೆಮ್ಮೆಯನ್ನು ಕಿಡಿಗೇಡಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮತ್ತಿಗೋಡು ಅರಣ್ಯ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.

ತಿತಿಮತಿ-ಹುಣಸೂರು-ಮೈಸೂರು ರಾಜ್ಯ ಹೆದ್ದಾರಿ 90ರಲ್ಲಿ ಭಾರಿ ಗಾತ್ರದ ಕಾಡೆಮ್ಮೆಯ ಶವ ಬಿದ್ದಿದ್ದು, ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ಬಳಿಕ ಪಳಗಿದ ಆನೆಗಳ ಸಹಾಯದಿಂದ ಕಾಡೆಮ್ಮೆಯ ಮೃತದೇಹವನ್ನು ಸ್ಥಳಾಂತರಿಸಿದರು.

ಕಾಡೆಮ್ಮೆಯ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದ್ದು, ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಲಾಖೆಯ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಸುಮಾರು 6 ವರ್ಷದ ಕಾಡೆಮ್ಮೆ ಇದಾಗಿದ್ದು, ದೇಹದಲ್ಲಿ ಎರಡು ಗುಂಡುಗಳು ಪತ್ತೆಯಾಗಿದೆ. ಎದೆ ಮತ್ತು ಕಾಲಿಗೆ ಗುಂಡುಗಳನ್ನು ಹಾರಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಕಾಡೆಮ್ಮೆಗೆ ಗುಂಡು ಹಾರಿಸಿದ ಕಿಡಿಗೇಡಿಗಳ ಪತ್ತೆಗೆ ಇದೀಗ ತನಿಖೆ ಆರಂಭಿಸಲಾಗಿದೆ ಎಂದು ನಾಗರಹೊಳೆ ವನ್ಯಜೀವಿ ವಿಭಾಗದ ಡಿಸಿಎಫ್ ಹರ್ಷ ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಲು ವಿರಾಜಪೇಟೆ ಡಿಸಿಎಫ್ ಸಂಪರ್ಕಕ್ಕೆ ಸಿಕ್ಕಿಲ್ಲ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗೆ ಗುಂಡಿನ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗಾಯಗೊಂಡ ಬಳಿಕ ಕಾಡೆಮ್ಮೆ ಭೀತಿಗೊಳಗಾಗಿ ಕಾಡಿನಿಂದ ಹೊರಬಂದು ರಸ್ತೆಯ ಮಧ್ಯದಲ್ಲಿ ಸಾವನ್ನಪ್ಪಿರಬಹುದು. ಘಟನೆ ಕುರಿತು ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಘಟನೆಯಿಂದ ಅರಣ್ಯ ಮಿತಿಯಲ್ಲಿ ಬೇಟೆಯಾಡುವ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದಂತಾಗಿದೆ.

SCROLL FOR NEXT