ರಾಜ್ಯ

ಬೆಂಗಳೂರು: ಹೊಸ ವರ್ಷದ ಪಾರ್ಟಿಗೆ ತಂದಿದ್ದ ರೂ.6.31 ಕೋಟಿ ಮೌಲ್ಯದ ಡ್ರಗ್ಸ್ ವಶ

Manjula VN

ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಎಂಟು ಜನರನ್ನು ಬಂಧಿಸಿ 6.31 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಹೊಸ ವರ್ಷದ ಪಾರ್ಟಿಗಳಲ್ಲಿ ಡ್ರಗ್ಸ್ ಮಾರಾಟ ಮಾಡಲು ಮುಂದಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೊಸ ವರ್ಷದ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜಾಗಬಹುದು ಎಂಬ ನಿರೀಕ್ಷೆಯಲ್ಲಿ ಒಂದು ತಿಂಗಳಿನಿಂದ ಡ್ರಗ್ಸ್ ದಂಧೆಕೋರರ ಮೇಲೆ ನಿಗಾ ಇರಿಸಿದ್ದೇವೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಿವಾಸಿಗಳಾದ ಆರು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಗೋವಾ, ದೆಹಲಿ, ಆಂಧ್ರಪ್ರದೇಶ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ತಂಗಿರುವ ನೈಜೀರಿಯನ್ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಕೊತ್ತನೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ಡ್ರಗ್ಸ್ ಗಳನ್ನು ಇರಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ದುಬಾರಿ ಬೆಲೆಗೆ ಮಾರಾಟ ಮಾಡಲು ಯೋಜನೆ ರೂಪಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಮತ್ತೊಂದು ದಾಳಿಯಲ್ಲಿ 2.3 ಕೆಜಿ ಎಂಡಿಎಂಎ, 250 ಎಕ್ಸ್‌ಟಾಸಿ ಮಾತ್ರೆಗಳು, 4 ಕೆಜಿ ಹ್ಯಾಶಿಶ್ ಆಯಿಲ್, 440 ಗ್ರಾಂ ಚರಸ್ ಮತ್ತು 7.1 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಅಂದಾಜು 6 ಕೋಟಿ ರೂ ಆಗಿದೆ.

ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಪೊಲೀಸರು ಐವರಿ ಕೋಸ್ಟ್ ಪ್ರಜೆಯನ್ನು ಬಂಧಿಸಿ 25 ಲಕ್ಷ ಮೌಲ್ಯದ 250 ಗ್ರಾಂ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಾಣಸವಾಡಿಯಲ್ಲಿ ಕೋಸ್ಟರಿಕಾದ ಪ್ರಜೆಯನ್ನೂ ಬಂಧಿಸಲಾಗಿದ್ದು, 6 ಲಕ್ಷ ರೂಪಾಯಿ ಮೌಲ್ಯದ ಕೊಕೇನ್ ಮತ್ತು ಎಕ್ಸ್‌ಟಾಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

SCROLL FOR NEXT