ರಾಜ್ಯ

EV ಅಭಿಯಾನ, EV ಎಕ್ಸ್ ಪೋಗೆ ಸಿಎಂ ಬೊಮ್ಮಾಯಿ ಚಾಲನೆ; ಇವಿ ಬಸ್ ಖರೀದಿಗೆ ಸರ್ಕಾರ ನಿರ್ಧಾರ

Srinivasamurthy VN

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ವಿದ್ಯುತ್ ಚಾಲಿತ ವಾಹನ ಅಭಿಯಾನ ಮತ್ತು EV ಎಕ್ಸ್ ಪೋಗೆ ಚಾಲನೆ ನೀಡಿದರು.

ಜಯಮಹಲ್ ರಸ್ತೆಯ ಚಾಮರವಜ್ರ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿಯವರು EV ಎಕ್ಸ್ ಪೋಗೆ ಚಾಲನೆ ನೀಡಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಜುಲೈ 1 ರಿಂದ 6ರವರೆಗೆ ಇವಿ ಎಕ್ಸ್ ಪೋ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಇಂಧನ ಜಗತ್ತು ಬದಲಾವಣೆ ಆಗುತ್ತಿದ್ದು, ಇಂಧನಕ್ಕೆ ತನ್ನದೇ ಆದ ಇತಿಹಾಸವಿದೆ. ಇಂಧನವಿಲ್ಲದೆ ಜೀವವೂ ಇಲ್ಲ, ಜೀವನವೂ ಇಲ್ಲ. ಇಂಧನ ಇತ್ತೀಚಿಗೆ ಪರಿಸರ ಹಾನಿಗೆ ಸೇರಿಕೊಂಡಿದೆ ಎಂದರು.

ಪರಿಸರವನ್ನು ಕಲುಷಿತ ಮಾಡುವಲ್ಲಿ ವಾಹನಗಳು ಹೊರಸೂಸುವ ಹೊಗೆ ಕಾರಣವಾಗುತ್ತಿದೆ. ನವೀಕರಿಸಬಹುದಾದ ಇಂಧನಕ್ಕೆ ಒತ್ತು ಕೊಡುವ ಅವಶ್ಯಕತೆ ಹೆಚ್ಚಾಗಿದೆ. ಹತ್ತು ಹಲವಾರು ಸಂಶೋಧನೆಯಿಂದ ಟೂ ವೀಲರ್‌ಗಳನ್ನು, ಕಾರು, ಬಸ್ಸುಗಳನ್ನು ಇವಿಗೆ ಜೋಡಣೆ ಮಾಡಲಾಗಿದೆ. ನವೀಕರಿಸಬಹುದಾದ ಇಂಧನದಲ್ಲಿ ವೈಜ್ಞಾನಿಕ ಸಂಶೋಧನೆ ಮಾಡಬೇಕಾದ ಅವಶ್ಯಕತೆ ಇದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾದ ಚಾರ್ಜರ್‌ಗಳನ್ನು ಇವಿ ನೀತಿ ಮಾಡಿ ಬೆಸ್ಕಾಂ ಮೂಲಕ ಒದಗಿಸುತ್ತಿದ್ದೇವೆ ಎಂದರು. ಇವಿ ಬಸ್‌ಗಳನ್ನು ಮಾಡಲು ನಿರ್ಣಯ ಮಾಡಿದ್ದೇವೆ.ಇಂದೇ ಬಿಎಂಟಿಸಿಗೆ ಇವಿ ಬಸ್‌ಗಳನ್ನು ಖರೀದಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದ ಸಿಎಂ ಸಚಿವ ಸಂಪುಟ ಸಭೆಯಲ್ಲಿ ಇವಿ ವಾಹನಗಳಿಗೆ ಒತ್ತು ನೀಡುವುದಾಗಿ ತಿಳಿಸಿದರು.

ಇವಿ ವಾಹನಗಳ ವೆಚ್ಚ ಜನರಿಗೆ ನಿಲುಕಲಿ
ಎಲೆಕ್ಟ್ರಿಕ್ ವಾಹನದ ವೆಚ್ಚ ಜನಸಾಮಾನ್ಯರಿಗೆ ನಿಲುಕುವಂತಿರಬೇಕು, ಆಗ ಮಾತ್ರ ಅದರ ಬಳಕೆ ಹೆಚ್ಚಾಗುತ್ತದೆ. ಈ ಬಗ್ಗೆ ಉತ್ಪಾದಕರು ಗಮನಹರಿಸಬೇಕು. ಇಂದು ಉತ್ತಮ ಬ್ಯಾಟರಿ ಮತ್ತು ಮೋಟಾರ್ ಗಳ ಅಗತ್ಯವಿದೆ. ಇವುಗಳನ್ನು ಆತ್ಮನಿರ್ಭರ್ ಭಾರತದಡಿಯಲ್ಲಿ ನಮ್ಮ ಯುವಕರೇ ಉತ್ಪಾದಿಸುತ್ತಿರುವುದು ಹೆಮ್ಮೆಯ ವಿಚಾರ. ಇವಿ ವಾಹನಗಳಿಗೆ ಅಗತ್ಯವಿರುವ ಚಾರ್ಜರ್‌ಗಳನ್ನು ನಮ್ಮ ಸರ್ಕಾರ ಇವಿ ಪಾಲಿಸಿ ಮಾಡುವ ಮೂಲಕ ಬೆಸ್ಕಾಂ ಅನ್ನು ನೋಡಲ್ ಏಜೆನ್ಸಿ ಮಾಡಿ ಬೆಂಗಳೂರಿನಲ್ಲಿ ಚಾರ್ಜಿಂಗ್ ಸ್ಟೇಷನ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ.

ಇನ್ನು ಹೆಚ್ಚಿನ ಚಾರ್ಜಿಂಗ್ ಸ್ಟೇಷನ್‍ಗಳ ಅವಶ್ಯಕತೆ ಇದೆ. ಅವುಗಳನ್ನು ಬೆಸ್ಕಾಂ ವತಿಯಿಂದ ಸ್ಥಾಪಿಸಲಾಗುವುದು ಎಂಬ ವಿಶ್ವಾಸವಿದೆ. ಬ್ಯಾಟರಿ ಸ್ವಾಪಿಂಗ್ ಅತ್ಯಂತ ಯಶಸ್ವಿ ಮಾಡಬೇಕಿದೆ. ಮುಂಬರುವ ದಿನಗಳಲ್ಲಿ ಬ್ಯಾಟರಿ ಸ್ವಾಪಿಂಗ್‌ಗೆ ಅತಿ ಹೆಚ್ಚಿನ ಮಹತ್ವವನ್ನು ನಾವೆಲ್ಲರೂ ನೀಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್, ಕೇಂದ್ರ ಸಚಿವ ಭಗವಂತ್ ಖೂಬಾ, ಸಚಿವ ಉಮೇಶ್ ಕತ್ತಿ, ಶಾಸಕ ಹರತಾಳು ಹಾಲಪ್ಪ ಭಾಗಿಯಾಗಿದ್ದರು.

SCROLL FOR NEXT