ಎಥೆನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿ; ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಪ್ಪಂದ: ಸಿಎಂ ಬೊಮ್ಮಾಯಿ
ಎಥೆನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೈಡ್ರೋಜನ್ ಇಂಧನ ಉತ್ಪಾದನೆಗೆ ಒತ್ತು ನೀಡಲಾಗಿದ್ದು, ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Published: 30th June 2022 04:48 PM | Last Updated: 30th June 2022 04:54 PM | A+A A-

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಎಥೆನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೈಡ್ರೋಜನ್ ಇಂಧನ ಉತ್ಪಾದನೆಗೆ ಒತ್ತು ನೀಡಲಾಗಿದ್ದು, ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನ ಆಡುಗೋಡಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಬಾಷ್ ಸ್ಮಾರ್ಟ್ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ತನ್ನ ಪರಿಶ್ರಮದಿಂದ ತಾಂತ್ರಿಕ ಹಬ್ ಆಗಿದೆ. ಜೆನಿಟಿಕ್ಸ್ ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ 400 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. 400 ಫಾರ್ಚೂನ್ ಕಂಪನಿಗಳಿವೆ. ಏರೋಸ್ಪೇಸ್, ನವೀಕರಿಸಬಹುದಾದ ಇಂಧನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೆಮಿಕಂಡಕ್ಟರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರು.
ಹೊಸ ಆಯಾಮ, ಸಂಶೋಧನೆಗಳ ಮೂಲಕ ಬೆಂಗಳೂರಿನಲ್ಲಿ ಶ್ರೇಷ್ಠ ತಾಂತ್ರಿಕ ಬೆಂಬಲ ವ್ಯವಸ್ಥೆ ರೂಪಿಸುವಂತೆ ಬಾಷ್ ಸಂಸ್ಥೆಗೆ ಸಲಹೆ ನೀಡಿದ ಮುಖ್ಯಮಂತ್ರಿ, ಬಾಷ್ ಸಂಸ್ಥೆಯ ಯೋಜನೆಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡಲಿದೆ. ಈ ಸಂಸ್ಥೆಯ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು ಎಂದು ಹೇಳಿದರು.
CM @BSBommai addressed the meet as Chief Guest, at @boschindia #SparkNXTCampus India's largest smart campus, at Audugodi in Bengaluru, inaugurated by Hon'ble Prime Minister Shri @narendramodi. pic.twitter.com/R1otf7wBaN
— CM of Karnataka (@CMofKarnataka) June 30, 2022
ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ, ಆರೋಗ್ಯ, ಉತ್ಪಾದನೆ, ಸಂಶೋಧನಾ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮುಂದಿನ 25 ವರ್ಷಗಳ ಬಹಳ ಪ್ರಮುಖವಾಗಿದ್ದು, ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ, ಸಮೃದ್ಧತೆ, ಜನರ ಜೀವನ ಮಟ್ಟ ಸುಧಾರಣೆ, ಉತ್ತಮ ಪರಿಸರ, ಪರಿಸರ ಮತ್ತು ಉದ್ಯಮಗಳ ಸಂಯೋಜನೆ ಸಾಧಿಸಬೇಕಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.