ರಾಜ್ಯ

ಇಬ್ಬರ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ: ಆನೆಗಳ ಸಹಾಯದಿಂದ ಸೆರೆ ಕಾರ್ಯಾಚರಣೆ

Shilpa D

ಚಾಮರಾಜನಗರ: ಇಬ್ಬರು ರೈತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ‌ ಲಕ್ಕಿಪುರ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಶಿವಪ್ಪ ಎಂಬುವವರ ಬಾಳೆ ತೋಟದಲ್ಲಿ ಅಡಗಿ ಕುಳಿತಿದ್ದ ಹುಲಿ ಸೆರೆಗೆ ಭಾನುವಾರ ಬೆಳಗ್ಗೆ ಮಳೆ ನಡುವೆಯೇ ಅಭಿಮನ್ಯು ಹಾಗೂ ಶ್ರೀಕಂಠ ಎಂಬ ಎರಡು ಆನೆಗಳ ಮೂಲಕ ಕೂಬಿಂಗ್ ಆರಂಭಿಸಿದ್ದರು.

ಹುಲಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕರೆ ಚುಚ್ಚು ಮದ್ದು ನೀಡುವ ಮೂಲಕ ಸೆರೆ ಹಿಡಿದಿದ್ದಾರೆ‌‌. ಮನುಷ್ಯರ ಮೇಲೆ ದಾಳಿ ಮಾಡಲು ಹುಲಿಗೆ ವಯಸ್ಸಾಗಿದೆಯೇ? ಇಲ್ಲವೇ ಗಾಯಗೊಂಡಿದೆಯೇ? ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲ. 

ಪಶುವೈದ್ಯರು ಪ್ರಾಣಿಯ ಆರೋಗ್ಯ ತಪಾಸಣೆ ನಡೆಸಿದಾಗ ಅದರ ಕಾಲುಗಳು, ಭುಜಗಳು, ಹೊಟ್ಟೆ ಮತ್ತು ಬಾಲದ ಬಳಿ ಗಂಭೀರವಾದ ಗಾಯಗಳು ಕಂಡುಬಂದವು. ಅದರ ಮುಂಭಾಗದ ಬಲಗಾಲಿಗೂ ಗಾಯವಾಗಿದೆ. ವಯಸ್ಸಿನ ಕಾರಣದಿಂದ ಮುಂಭಾಗದ ಎರಡು ಕೋರೆಹಲ್ಲುಗಳು ಸವೆದುಹೋಗಿವೆ ಮತ್ತು ಅದು ತುಂಬಾ ದುರ್ಬಲ ಸ್ಥಿತಿಯಲ್ಲಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಚಿಕಿತ್ಸೆಗಾಗಿ ಕೂರ್ಗಳ್ಳಿಯಲ್ಲಿರುವ ಶ್ರೀ ಚಾಮುಂಡಿ ಪ್ರಾಣಿ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಟಿಆರ್ ನಿರ್ದೇಶಕ ಪಿ ರಮೇಶ್ ಕುಮಾರ್ ತಿಳಿಸಿದ್ದಾರೆ.

2014 ರಿಂದ 2021 ರವರೆಗೆ ಹೆಡಿಯಾಲ ಅರಣ್ಯ ವ್ಯಾಪ್ತಿಯಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳ ಮೂಲಕ ಹುಲಿಯನ್ನು ಟ್ರೇಸ್ ಮಾಡಲಾಯಿತು. ಅರಣ್ಯಾಧಿಕಾರಿಗಳು ಹುಲಿಯ ಚಿತ್ರಗಳನ್ನು ಬೆಂಗಳೂರಿನ ಟೈಗರ್ ಸೆಲ್‌ಗೆ ಕಳುಹಿಸಿದ್ದಾರೆ, ಈ ವಿವರಗಳು ಹುಲಿಯನ್ನು ಗುರುತಿಸಲು ಸಹಾಯ ಮಾಡಿತು ಎಂದು ಕುಮಾರ್ ಹೇಳಿದರು.

SCROLL FOR NEXT