ರಾಜ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರ: ಹಲವು ಕಡೆಗಳಲ್ಲಿ ಭೂಕುಸಿತ

Sumana Upadhyaya

ಮಂಗಳೂರು: ಕಳೆದೊಂದು ವಾರದಿಂದ ಬಿಟ್ಟೂಬಿಡದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ನಿನ್ನೆ ಶುಕ್ರವಾರ ಮಳೆ ಕಡಿಮೆಯಾಗಿದ್ದರೂ ಸತತ ಮಳೆಯಿಂದಾಗಿ ಹಲವೆಡೆ ಸಾಕಷ್ಟು ಅವಘಡಗಳು, ಹಾನಿ ಸಂಭವಿಸಿವೆ. ಹಲವೆಡೆ ಭೂಕುಸಿತ, ಮರಗಳು ಧರೆಗುರುಳಿದ್ದು, ಮಳೆ ನೀರು ಹಲವು ಕಡೆಗಳಲ್ಲಿ ಮನೆಯೊಳಗೆ ನುಗ್ಗಿವೆ.

ಇಂದು ಶನಿವಾರದವರೆಗೆ ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಜೆ. ನಿನ್ನೆ ಸಾಯಂಕಾಲ ಹೊತ್ತಿಗೆ ಮಳೆ ಕಡಿಮೆಯಾಯಿತು. 

ಮೂಡಬಿದಿರೆಯಲ್ಲಿ ಅಡಿಕೆ ತೋಟ ಕುಸಿದು ಮನೆ ಅಪಾಯದಲ್ಲಿದೆ. ಪ್ರಶಾಂತ್ ಮತ್ತು ರಾಜೇಶ್ ಎಂಬುವರಿಗೆ ಸೇರಿದ ಜಮೀನಿನ ಮಣ್ಣು ಜಾರಿ ಬಿದ್ದಿದ್ದು, ಮನೆ ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ. 100ಕ್ಕೂ ಹೆಚ್ಚು ಅಡಕೆ ಮರಗಳು ಸಂಪೂರ್ಣ ನಾಶವಾಗಿದ್ದು, 25 ಲಕ್ಷ ರೂಪಾಯಿಗಳವರೆಗೆ ನಷ್ಟವಾಗಿದೆ. ಭೂಕುಸಿತದ ಭೀತಿಯಿಂದ ಮನೆಯವರು ಮನೆ ಖಾಲಿ ಮಾಡಿದ್ದಾರೆ. ಸುಳ್ಯ ತಾಲ್ಲೂಕಿನ ಜಾಲ್ಸೂರಿನಲ್ಲೂ ಗುಡ್ಡ ಕುಸಿದಿದ್ದು ಹಲವು ವಾಹನಗಳು ಹಾನಿಗೀಡಾಗಿವೆ.

ಮಂಗಳೂರಿನ ಬೊಂದೆಲ್ ಬಳಿಯ ಬಟ್ರಕೋಡಿಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ರಸ್ತೆ ಸಂಪೂರ್ಣ ಹಾಳಾಗಿದೆ. ಐದು ತಿಂಗಳ ಹಿಂದೆ ನಿರ್ಮಿಸಿದ ರಸ್ತೆಯಲ್ಲಿ ಮಳೆ ನೀರು ಹರಿಯಲು ಸೂಕ್ತ ಸೌಲಭ್ಯ ಇಲ್ಲದ ಕಾರಣ ಬಿರುಕು ಬಿಟ್ಟಿದೆ. ಇದೇ ವೇಳೆ ನಗರದ ಕೊಟ್ಟಾರ ಗುತ್ತು ಎಂಬಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಕಣ್ಣೂರಿನಲ್ಲಿ ಭೂಕುಸಿತದಿಂದ ಹಲವು ಕುಟುಂಬಗಳು ಅಪಾಯದಲ್ಲಿವೆ. 

ಮೋರಿ ಕೊಚ್ಚಿಹೋಗಿ ಸೃಷ್ಟಿಯಾದ ಕಂದಕದಿಂದ ಅದ್ಯಪಾಡಿ ಮುಖ್ಯ ಕಾಂಕ್ರೀಟ್ ರಸ್ತೆಯ ಒಂದು ಭಾಗವನ್ನು ಮಂಗಳೂರು ವಿಮಾನ ನಿಲ್ದಾಣದ ಕಡೆಗೆ ಹೋಗುವ ರಸ್ತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಅದನ್ನೀಗ ಅಧಿಕಾರಿಗಳು ಖುದ್ದಾಗಿ ಹೋಗಿ ಪರಿಶೀಲಿಸಿ ಸರಿಪಡಿಸಿದ್ದಾರೆ. ಅಧಿಕಾರಿಗಳು ಕಾಂಕ್ರೀಟ್ ರಸ್ತೆಯ ಭಾಗವನ್ನು ಕೆಡವಿದ್ದರು. ಇದೀಗ 8 ಮೀಟರ್ ಅಗಲದ ಕಂದಕವನ್ನು ಬೃಹತ್ ಬಂಡೆಗಳಿಂದ ತುಂಬುವ ಕೆಲಸವನ್ನು ಪ್ರಾರಂಭಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ರನ್‌ ವೇ ಮಧ್ಯಭಾಗದಿಂದ ಒಳಗಿನ ತಡೆಗೋಡೆಗೆ ಇರುವ ಅಂತರವು ಸುಮಾರು 75 ಮೀಟರ್‌ಗಳಷ್ಟಿದೆ. ಪರಿಧಿಯ ಗೋಡೆಗೆ ಹೆಚ್ಚುವರಿ 25 ಮೀಟರ್‌ಗಳ ಬಫರ್ ಇದೆ, ಇದು ಗಟ್ಟಿಯಾದ ಅಡಿಪಾಯದ ಮೇಲೆ ನಿರ್ಮಿಸಲಾದ ಗೋಡೆಯ ಮೇಲೆ ನಿಂತಿದೆ. ರನ್‌ವೇಗೆ ಯಾವುದೇ ಅಪಾಯವಿಲ್ಲ. ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಸಾಮಾನ್ಯವಾಗಿ ನಡೆಯುತ್ತಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

SCROLL FOR NEXT