ರಾಜ್ಯ

ಉಡುಪಿಯಲ್ಲಿ ಭಾರೀ ಮಳೆ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ; ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್

Shilpa D

ಹೆಬ್ರಿ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತವಾಗಿದ್ದು ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಘಾಟಿಯ ನಾಲ್ಕನೆ ತಿರುವಿನಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದು ಮರಗಳು ಬಿದ್ದಿವೆ.

ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣದಿಂದ ಆಗುಂಬೆ ಘಾಟಿಯ ಮೂರು ಮತ್ತು ನಾಲ್ಕನೇ ಸುತ್ತಿನ ಮಧ್ಯಭಾಗದಲ್ಲಿ ಭೂಕುಸಿತವಾಗಿದೆ. ಭಾರೀ ಪ್ರಮಾಣದ ಮಣ್ಣು ಮತ್ತು ಮರ ರಸ್ತೆಗೆ ಬಿದ್ದ ಕಾರಣ ಸಂಚಾರ ಸ್ಥಗಿತವಾಗಿದೆ.

ತಡರಾತ್ರಿ ಗುಡ್ಡ ಕುಸಿತದ ಪರಿಣಾಮ ರಾತ್ರಿಯಿಂದಲೇ ವಾಹನ ಸಂಚಾರ ಬಂದ್ ಆಗಿದ್ದು, ಶಿವಮೊಗ್ಗ ಆಗುಂಬೆಯಿಂದ ಉಡುಪಿಗೆ ಬರುವ ವಾಹನಗಳು ಸಿದ್ಧಾಪುರ ಮೂಲಕ ಬರುತ್ತಿದೆ. ಗುಡ್ಡ ತೆರವು ಕಾರ್ಯ ಅರಂಭವಾಗಿದ್ದರೂ ವಾಹನಗಳ ಸುಗಮ ಸಂಚಾರಕ್ಕೆ ಸಮಯ ಬೇಕಾಗಬಹುದು‌. ನಿರಂತರ ಸುರಿಯುತ್ತಿರುವ ಮಳೆಯಿಂದ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಸುಮಾರು 30 ಮೀಟರ್‌ನಷ್ಟು ಭೂಕುಸಿತ ಉಂಟಾಗಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆಗುಂಬೆ ಘಾಟಿಯಲ್ಲಿ ಗುಡ್ಡ ಜರಿದ ಪರಿಣಾಮ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣಿಕರು ಬದಲಿ ರಸ್ತೆ ಉಪಯೋಗಿಸುವುದು ಸೂಕ್ತ ಎಂದು ಜಿಲ್ಲಾಡಳಿತ ತಿಳಿಸಿದೆ.

ರಸ್ತೆ ತೆರವು ಕಾರ್ಯಾಚರಣೆ ಈಗಾಗಲೇ ಆರಂಭವಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಪೊಲೀಸ್ ಹಾಗೂಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT