ರಾಜ್ಯ

ಬೆಂಗಳೂರು: ಕಾಡುಪ್ರಾಣಿಗಳ ಬೇಟೆಗೆ ಸಜ್ಜಾಗಿದ್ದ ಐವರು ಸ್ನೇಹಿತರ ಬಂಧನ, ಎರಡು ಬಂದೂಕು ಜಪ್ತಿ

Lingaraj Badiger

ಬೆಂಗಳೂರು: ಕಾಡುಪ್ರಾಣಿಗಳನ್ನು ಬೇಟೆಯಾಡಲು ಕನಕಪುರ ಸಮೀಪದ ಅರಣ್ಯ ಪ್ರದೇಶಕ್ಕೆ ಹೊರಟಿದ್ದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಐವರು ಸ್ನೇಹಿತರ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ಬಳಿ ಇದ್ದ ಎರಡು ಬಂದೂಕು ಮತ್ತು ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.

ಕಾರಿನಲ್ಲಿದ್ದ ತೆರಳುತ್ತಿದ್ದ ಸ್ನೇಹಿತರ ಚಲನವಲನದ ಬಗ್ಗೆ ಅನುಮಾನಗೊಂಡ ಪೊಲೀಸರು ಕಾರನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವರ ಬಳಿ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಈ ಗ್ಯಾಂಗ್‌ನಿಂದ ಡಬಲ್ ಬ್ಯಾರಲ್ ಗನ್, ಒಂದು ಸಿಂಗಲ್ ಬ್ಯಾರೆಲ್ ಗನ್, ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅದೃಷ್ಟವಶಾತ್ ಅವರು ಅರಣ್ಯ ಪ್ರದೇಶಕ್ಕೆ ನುಗ್ಗಿ ಯಾವುದೇ ಕಾಡು ಪ್ರಾಣಿಗಳನ್ನು ಕೊಲ್ಲುವ ಮುನ್ನ ಸಿಕ್ಕಿಬಿದ್ದಿದ್ದಾರೆ. ಇವರು ಕಾಡುಪ್ರಾಣಿ ಬೇಟೆಗಾರರು ಎಂದು ಪೊಲೀಸರು ಶಂಕಿಸಿದ್ದಾರೆ. ಸಾಮಾನ್ಯವಾಗಿ ಪ್ರಾಣಿಗಳು ಕಾಣಸಿಗುವ ಕಾಡಿನ ಬಗ್ಗೆ ತಿಳಿದಿರುವ ಸ್ಥಳೀಯ ಬೇಟೆಗಾರನಿಗಾಗಿ ಕಾಯುತ್ತಿದ್ದಾಗ ಈ ಗ್ಯಾಂಗ್ ಸಿಕ್ಕಿಬಿದ್ದಿದೆ.

ಬಂಧಿತರನ್ನು ಬಿಡದಿ ನಿವಾಸಿಗಳಾದ ಗೊಟ್ಟಿಗೆರೆಯ ಎ ಅರುಣ್ ಕುಮಾರ್ (42), ಬಿಡದಿಯ ಕೆ ರಾಜಶೇಖರ್ (45), ಎನ್ ರಾಮಕೃಷ್ಣ (36), ಎನ್ ನರಸಿಂಹಮೂರ್ತಿ (33) ಮತ್ತು ಎಂ ನರಸಿಂಹರಾಜು (61) ಎಂದು ಗುರುತಿಸಲಾಗಿದೆ. ಐವರಲ್ಲಿ ರಾಮಕೃಷ್ಣ ಮತ್ತು ನರಸಿಂಹಮೂರ್ತಿ ಸಹೋದರರಾಗಿದ್ದು, ಭಾನುವಾರ ನಸುಕಿನ ಜಾವ 12.15ರ ಸುಮಾರಿಗೆ ಹಾರೋಹಳ್ಳಿ ಸಮೀಪದ ದೊಡ್ಡಮುದವಾಡಿ ಗ್ರಾಮದ ಬಳಿ ಸಿಕ್ಕಿಬಿದ್ದಿದ್ದಾರೆ.

ಉಪನಿರೀಕ್ಷಕರ ನೇತೃತ್ವದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು, ಅವರ ಅನುಮಾನಾಸ್ಪದ ಚಲನವಲನವನ್ನು ಕಂಡು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.

ಷರತ್ತುಗಳನ್ನು ಉಲ್ಲಂಘಿಸಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಸ್ತ್ರಾಸ್ತ್ರಗಳ ಜೊತೆಗೆ ಒಂದು ಕಾರು ಮತ್ತು 47500 ರೂ ನಗದು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

1959 ರ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸ್ಥಳೀಯ ಪೊಲೀಸರು ಈ ಐವರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

SCROLL FOR NEXT