ರಾಜ್ಯ

ಮಳೆ ಹಾನಿ: ಮೂಲಸೌಕರ್ಯ ಪರಿಹಾರ ಕಾರ್ಯಗಳಿಗೆ 500 ಕೋಟಿ ರೂ. ಬಿಡುಗಡೆ- ಮುಖ್ಯಮಂತ್ರಿ ಬೊಮ್ಮಾಯಿ

Sumana Upadhyaya

ಉಡುಪಿ: ಜುಲೈ ತಿಂಗಳಲ್ಲಿ ಕರಾವಳಿ, ಮಲೆನಾಡು, ಕೊಡಗು, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜೀವಹಾನಿ, ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಈ ನಿಟ್ಟಿನಲ್ಲಿ ಪರಿಹಾರ, ಪುನರ್ವಸತಿ ಕಾರ್ಯಗಳಿಗೆ 500 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. 

ಕರಾವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಇಂದು ಉಡುಪಿಯಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಹಾನಿಯಾಗಿರುವ ರಸ್ತೆಗಳ ದುರಸ್ತಿ, ಸಣ್ಣ ಸೇತುವೆಗಳ ನಿರ್ಮಾಣ ಸರ್ಕಾರದ ಆದ್ಯತೆಯ ಕೆಲಸಗಳಾಗಿವೆ. ರಾಜ್ಯದಲ್ಲಿ ರಸ್ತೆಗಳ ನಿರ್ಮಾಣ, ಸಣ್ಣ ಸೇತುವೆಗಳು, ವಿದ್ಯುತ್ ಕಂಬಗಳ ಮರುಸ್ಥಾಪನೆಗಳನ್ನು ಆದ್ಯತೆಯ ಕೆಲಸವಾಗಿ ಸರ್ಕಾರ ತೆಗೆದುಕೊಳ್ಳಲಿದ್ದು ಈ ಮೂಲಸೌಕರ್ಯಗಳಿಗೆ 500 ಕೋಟಿ ರೂಪಾಯಿ ಹಣವನ್ನು ಬಳಸಿಕೊಳ್ಳಲಾಗುವುದು, ಅಗತ್ಯಬಿದ್ದರೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಜಿಲ್ಲಾ ಮಟ್ಟದಿಂದ ಮಳೆ ಸಂಬಂಧಿ ಅನಾಹುತಗಳ ಅಂಕಿಅಂಶಗಳನ್ನು ಸಂಗ್ರಹಿಸಿದ ನಂತರ ಅಗತ್ಯಬಿದ್ದರೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF)ಯಿಂದ ಹೆಚ್ಚುವರಿ ಹಣವನ್ನು ಕೇಳಲಾಗುವುದು ಎಂದರು.

ಮಳೆ ಅಧಿಕವಾಗಿರುವಾಗ ಕರಾವಳಿ ಭಾಗದಲ್ಲಿ ಕಡಲ್ಕೊರೆತ ಸಮಸ್ಯೆಗೆ ಸಮುದ್ರ ಅಲೆ ತಡೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪ್ರಾಯೋಗಿಕ ಮಾದರಿಯಲ್ಲಿ ನಿರ್ಮಿಸಲಾಗುವುದು. ಈ ಮಾದರಿ ಸಮುದ್ರ ಕೊರೆತ ತಡೆಯುವಲ್ಲಿ ಯಶಸ್ವಿಯಾದರೆ ಎಲ್ಲೆಲ್ಲಿ ಸಮುದ್ರ ಕೊರೆತ ಸಮಸ್ಯೆಯಿದೆಯೋ ಅಲ್ಲಿಗೆ ವಿಸ್ತರಿಸಲಾಗುವುದು ಎಂದು ಕೂಡ ತಿಳಿಸಿದರು.

ಸಮುದ್ರ ಕಿನಾರೆ ಕೊರೆತ ತಡೆಯಲು ತಾತ್ಕಾಲಿಕ ಕ್ರಮಗಳನ್ನು ಸಹ ಅನುಸರಿಸಲಾಗುವುದು ಎಂದು ಕೂಡ ತಿಳಿಸಿದರು.

SCROLL FOR NEXT