ರಾಜ್ಯ

ನ್ಯಾಯಾಧೀಶರಿಗೆ ವರ್ಗಾವಣೆ ಬೆದರಿಕೆ: ಎಸ್ಐಟಿ ತನಿಖೆಗೆ ಆದೇಶ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ

Srinivas Rao BV

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಹೆಚ್ ಪಿ ಸಂದೇಶ್ ಅವರಿಗೆ ವರ್ಗಾವಣೆ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ(ಎಸ್ ಐಟಿ) ದಿಂದ ವಿಚಾರಣೆ ನಡೆಸಲು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. 

ನ್ಯಾಯಾಧೀಶರಾದ ಸಂದೇಶ್ ಅವರು ಜು.14 ರಂದು ನೀಡಿದ್ದ ಆದೇಶವೊಂದರಲ್ಲಿ ತಮಗೆ ಮತ್ತೋರ್ವ ನ್ಯಾಯಾಧೀಶರಿಂದ, ಹೈಕೋರ್ಟ್ ನಲ್ಲಿ ನಡೆದಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ವರ್ಗಾವಣೆ ಬೆದರಿಕೆ ಬಂದಿತ್ತು ಎಂಬುದನ್ನು ಉಲ್ಲೇಖಿಸಿದ್ದರು.

ಅಡ್ವೊಕೇಟ್ ರಮೇಶ್ ನಾಯ್ಕ್ ಎಲ್ ಎಂಬುವವರು ಈಗ ಈ ವಿಷಯವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಧೀಶ ಸಂದೇಶ್ ಅವರಿಗೆ ಬಂದಿದ್ದ ಬೆದರಿಕೆ ಬಗ್ಗೆ ಎಸ್ ಐಟಿ ತನಿಖೆ ನಡೆಸಲು ಆದೇಶಿಸಬೇಕು ಹಾಗೂ ನ್ಯಾಯಾಧೀಶರಿಗೆ ಸಮರ್ಪಕ ಭದ್ರತೆಯನ್ನು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. 

ಈ ಬೆದರಿಕೆ ಬಗ್ಗೆ ಗಂಭೀರವಾದ ತನಿಖೆ, ವಿಚಾರಣೆ ನಡೆಸದೇ ಇದ್ದಲ್ಲಿ, ಭಾರತದ ಜನತೆ ಹೈಕೋರ್ಟ್ ಗಳು ಹಾಗೂ ಅದರ ನ್ಯಾಯಾಧೀಶರ ಮೇಲೆ ಇಟ್ಟಿರುವ ನಂಬಿಕೆ ಅಲುಗಾಡುತ್ತದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಅರ್ಜಿ ವಿಚಾರಣೆಗೆ ಇನ್ನಷ್ಟೇ ಹೋಗಬೇಕಿದ್ದು, ಕೋರ್ಟ್ ಪ್ರಕ್ರಿಯೆಗಳ ನಂತರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: 'ಎಸಿಬಿ' ಕಲೆಕ್ಷನ್ ಸೆಂಟರ್: ಬೆಕ್ಕಿಗೆ ಗಂಟೆ ಕಟ್ಟಲು ನಾನು ಸಿದ್ಧ, ಯಾವುದಕ್ಕೂ ಜಗ್ಗಲ್ಲ; ವರ್ಗಾವಣೆ ಬೆದರಿಕೆ ವಿರುದ್ಧ ಹೈಕೋರ್ಟ್ ಜಡ್ಜ್  ಆಕ್ರೋಶ!
 
ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಅದರ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ಬಗ್ಗೆ ಮಾತನಾಡಿದ್ದಕ್ಕಾಗಿ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿಗೆ ಬೆದರಿಕೆ ಬಂದಿತ್ತು.
 
ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾದ ಡೆಪ್ಯುಟಿ ತಹಶೀಲ್ದಾರ್ ಅವರ ಜಾಮೀನು ಅರ್ಜಿ ಆದೇಶದಲ್ಲಿ ನ್ಯಾ.ಸಂದೇಶ್ ತಮಗೆ ಬೆದರಿಕೆ ಬಂದಿದ್ದನ್ನು ಉಲ್ಲೇಖಿಸಿದ್ದರು.

ಈ ವಿಚಾರದಲ್ಲಿ ಎಡಿಜಿಪಿ ತಮ್ಮ ವಿರುದ್ಧ ಹೈಕೋರ್ಟ್ ನ್ಯಾಯಾಧೀಶರು ಮಾಡಿದ್ದ ಟೀಕೆಗಳನ್ನು ತೆರವುಗೊಳಿಸುವುದಕ್ಕಾಗಿ ಮನವಿ ಮಾಡಿದ್ದರ ಮೂಲಕ ಇಡೀ ಪ್ರಹಸನ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 

SCROLL FOR NEXT