ರಾಜ್ಯ

ಬೆಲೆ ಏರಿಕೆಗೆ ಸಾರ್ವಜನಿಕರಿಂದ ಆಕ್ರೋಶ: ನಂದಿನಿ ಹಾಲು ಉತ್ಪನ್ನಗಳ ಬೆಲೆ ಇಳಿಕೆ

Srinivas Rao BV

ಬೆಂಗಳೂರು: ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿದ ಪರಿಣಾಮ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದಕ್ಕೆ ಸಾರ್ವಜನಿಕರಿಂದ ವ್ಯಕ್ತವಾದ ಭಾರೀ ವಿರೋಧಕ್ಕೆ ಕೆಎಂಎಫ್ ಮಣಿದಿದೆ. 

ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿ, ಬೆಲೆ ಇಳಿಕೆ ಬಗ್ಗೆ ಸಿಎಂ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕೆಎಂಎಫ್ ಉತ್ಪನ್ನಗಳ ಮೇಲಿನ ಬೆಲೆ ಏರಿಕೆಯನ್ನು ಸ್ವಲ್ಪ ತಗ್ಗಿಸಿದೆ. ನಂದಿನಿ ಮೊಸರು, ಲಸ್ಸಿ, ಮಜ್ಜಿಗೆ ದರವನ್ನು 50 ಪೈಸೆಯಿಂದ 1.50 ರೂ. ವರೆಗೂ ಕಡಿಮೆ ಮಾಡಿದೆ. ಈ ಪರಿಷ್ಕೃತ ದರ ಮಂಗಳವಾರದಿಂದ ಜಾರಿಗೆ ಬರಲಿದೆ.

ಬೆಲೆ ಇಳಿಕೆ ಮಾಡಿದ ಮೇಲೆ 200 ಗ್ರಾಮ್ ಮೊಸರಿಗೆ 10.50 ರೂಪಾಯಿ ನಿಗದಿಪಡಿಸಲಾಗಿದೆ. ಇದರಿಂದ ಬೆಲೆ ಏರಿಕೆಗೂ ಹಿಂದೆ ಇದ್ದ ದರಕ್ಕಿಂತ 50 ಪೈಸೆ ಹೆಚ್ಚಿಸಲಾಗಿದೆ. ಜಿಎಸ್ ಟಿ ವಿಧಿಸಿದ್ದರ ಆಧಾರದಲ್ಲಿ ಬೆಲೆ ಏರಿಕೆ ಮಾಡಿದ್ದರೆ, 200 ಗ್ರಾಂ ಮೊಸರಿನ ದರವನ್ನು 1 ರೂ. 68 ಪೈಸೆಗೆ ಹೆಚ್ಚಿಸಬೇಕಿತ್ತು. ಕೆಎಂಎಫ್‌ ಒಟ್ಟು 2 ರೂ. ಏರಿಕೆ ಮಾಡಿತ್ತು. ಆದರೆ ಈಗ 50 ಪೈಸೆ ಮಾತ್ರ ಹೆಚ್ಚಿಸಲಾಗಿದೆ.

ಇನ್ನು 200 ಮಿ.ಲೀ. ಸ್ಯಾಚೆಯ ಮಜ್ಜಿಗೆ ದರ ಜಿಎಸ್ ಟಿ ಅನ್ವಯದ ಪ್ರಕಾರ 7 ರೂ. ನಿಂದ 8 ರೂ.ಗಳಿಗೆ ಹೆಚ್ಚಿಸಲಾಗಿತ್ತು. ಇತ್ತೀಚಿನ ಪರಿಷ್ಕೃತ ದರದ ಅನ್ವಯ 8 ರೂಪಾಯಿಗಳ ಬದಲು 7.50 ರೂ.ಗಳಿಗೆ ನಿಗದಿಪಡಿಸಲಾಗಿದೆ. 200 ಮಿ.ಲೀ ಸ್ಯಾಚೆಯ ಲಸ್ಸಿ ದರವನ್ನು 10 ರೂ. ನಿಂದ 11 ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈಗ ಹೊಸ ದರದ ಅನ್ವಯ 10.50 ರೂ.ಗಳಿಗೆ ನಿಗದಿಪಡಿಸಲಾಗಿದೆ.

SCROLL FOR NEXT