ರಾಜ್ಯ

ಕೆಎಸ್ ಆರ್ ಟಿಸಿ ಆಸ್ಪತ್ರೆ ಖಾಸಗೀಕರಣಕ್ಕೆ ಸಂಸದ ತೇಜಸ್ವಿ ಸೂರ್ಯ ಯತ್ನ: ಕಾರ್ಮಿಕ ಒಕ್ಕೂಟ ಅಧ್ಯಕ್ಷ ಅನಂತ ಸುಬ್ಬಾರಾವ್

Srinivas Rao BV

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಅವರು ಜಯನಗರದಲ್ಲಿರುವ ಕೆಎಸ್ ಆರ್ ಟಿಸಿ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕೆಎಸ್ ಆರ್ ಟಿಸಿ ಸಿಬ್ಬಂದಿ ಹಾಗೂ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಹೆಚ್ ವಿ ಅನಂತ ಸುಬ್ಬಾರಾವ್ ಆರೋಪಿಸಿದ್ದಾರೆ. ಆದರೆ ಸಂಸದರು ಈ ಆರೋಪವನ್ನು ನಿರಾಕರಿಸಿದ್ದಾರೆ. 

"ಸಂಸದ ತೇಜಸ್ವಿ ಸೂರ್ಯ ಅವರು ಜಯನಗರದಲ್ಲಿ  ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಗಾಗಿಯೇ ಇರುವ ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಲು ಸಿಎಂ ಬೊಮ್ಮಾಯಿ, ಸಾರಿಗೆ ಸಚಿವ ಶ್ರೀರಾಮುಲು ಅವರ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಅನಂತ ಸುಬ್ಬಾರಾವ್ ಆರೋಪಿಸಿದ್ದಾರೆ.

ಸರ್ಕಾರ ಜಯನಗರದ ಪ್ರದೇಶದಲ್ಲಿ ಕೆಎಸ್ ಆರ್ ಟಿಸಿ ನೌಕರರು, ಸಿಬ್ಬಂದಿಗಳ ಚಿಕಿತ್ಸೆಗಾಗಿ ಆಸ್ಪತ್ರೆ ನಿರ್ಮಿಸಿದೆ. ದಶಕಗಳಿಂದ ಸಾವಿರಾರು ಮಂದಿ ಕೆಎಸ್ ಆರ್ ಟಿಸಿ ಸಿಬ್ಬಂದಿಗಳು ಈ ಆಸ್ಪತ್ರೆಯಿಂದ ಚಿಕಿತ್ಸೆ, ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಆದರೆ ಸಂಸದ ತೇಜಸ್ವಿ ಸೂರ್ಯ ಅವರು ಈ ಆಸ್ಪತ್ರೆಯನ್ನು ಡಯಾಲಿಸಿಸ್ ಕೇಂದ್ರ ಸ್ಥಾಪನೆಗಾಗಿ ವಾಸವಿ ಸಮೂಹಕ್ಕೆ 30 ವರ್ಷಗಳ ಗುತ್ತಿಗೆ (lease) ನೀಡಲು ಯತ್ನಿಸುತ್ತಿದ್ದಾರೆ. ಇದರ ಬದಲು ಉತ್ತಮವಾದ ಡಯಾಲಿಸಿಸ್ ಸೌಲಭ್ಯ ಕೇಂದ್ರವನ್ನು ನಿರ್ಮಿಸುವುದಕ್ಕೆ ಅವರೇ ಅನುದಾನ ನೀಡಲಿ ಎಂದು ಅನಂತ ಸುಬ್ಬಾರಾವ್ ಹೇಳಿದ್ದಾರೆ.

ಕೆಎಸ್ ಆರ್ ಟಿಸಿಯಲ್ಲಿ ಚಾಲಕನೋರ್ವ 30 ವರ್ಷಗಳ ಸೇವೆ ಸಲ್ಲಿಸಿದ ನಂತರ ಆತನಿಗೆ ಅನೇಕ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ವಿಶೇಷ ಚಿಕಿತ್ಸೆಯ ಅಗತ್ಯವಿದೆ. ಈ ಚಿಕಿತ್ಸೆಯನ್ನು ಈಗಿರುವ ಜಯನಗರದ ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಗಾಗಿಯೇ ನಿರ್ಮಿಸಲಾಗಿರುವ ಆಸ್ಪತ್ರೆಯಲ್ಲಿ ಪಡೆಯಬಹುದಾಗಿದೆ. ಈ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸುವುದು ಮತದಾರರ ಒಂದು ಭಾಗವನ್ನು ಸಮಾಧಾನಪಡಿಸುವುದಕ್ಕಾಗಿ ನಡೆಯುತ್ತಿರುವ ಯತ್ನ ಎಂದು ಸುಬ್ಬಾರಾವ್ ಆರೋಪಿಸಿದ್ದಾರೆ. 

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ತಾವು ಕೆಎಸ್ ಆರ್ ಟಿಸಿ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಲು ಯತ್ನಿಸುತ್ತಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT