ರಾಜ್ಯ

ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗದ ಕೊರತೆ: ಖಾಸಗಿಯವರಿಂದ ಭೂಮಿ ಖರೀದಿಗೆ ಕಂದಾಯ ಇಲಾಖೆ ನಿರ್ದೇಶನ

Nagaraja AB

ಬೆಂಗಳೂರು: ರಾಜ್ಯದಲ್ಲಿ ಸ್ಮಶಾನಕ್ಕೆ ಜಮೀನು ಕೊರತೆ ಹೆಚ್ಚಾಗುತ್ತಿರುವಂತೆಯೇ ಖಾಸಗಿಯವರಿಂದ ಭೂಮಿ ಖರೀದಿಸುವಂತೆ ಕಂದಾಯ ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಿದೆ. ಸ್ಮಶಾನಕ್ಕಾಗಿ ಜಾಗ ಕೋರಿ ರಾಜ್ಯಾದ್ಯಂತ ಗ್ರಾಮಸ್ಥರಿಂದ ಅರ್ಜಿ ಸ್ವೀಕರಿಸಿದ ನಂತರ ಇಲಾಖೆ ಈ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ 6,000 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 29, 438 ಗ್ರಾಮಗಳು ಬರುತ್ತವೆ. ಈ ವರ್ಷದ ಜನವರಿಯಲ್ಲಿ ಅನೇಕ ಹಳ್ಳಿಗಳಲ್ಲಿ ಸ್ಮಶಾನದ ಕೊರತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು.

ಸಭೆಯಲ್ಲಿ 4,370 ಹಳ್ಳಿಗಳಲ್ಲಿ ಸ್ಮಶಾನವಿಲ್ಲ ಎಂಬ ಅಂಶ ಬೆಳಕಿಗೆ ಬಂದಿತ್ತು. ಇದೇ ಉದ್ದೇಶಕ್ಕಾಗಿ ಭೂ ಸ್ವಾಧೀನಕ್ಕೆ ಸರ್ಕಾರದ ಕ್ರಮ ಕೈಗೊಳ್ಳಲಾಗಿತ್ತು. ಮಾರ್ಚ್ ಅಂತ್ಯದೊಳಗೆ ಇದನ್ನು ಅಂತಿಮಗೊಳಿಸಲು ನಿರೀಕ್ಷಿಸಲಾಗಿತ್ತು. ಉತ್ತರ ಕರ್ನಾಟಕ ಹಾಗೂ ಮಲೆನಾಡು ವಲಯದ ಬಹುತೇಕ ಹಳ್ಳಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.

ಆದಾಗ್ಯೂ, ಎಲ್ಲಾ ಹಳ್ಳಿಗಳಲ್ಲೂ ಭೂಮಿ ಸ್ವಾಧೀನ ಸಾಧ್ಯವಾಗಲಿಲ್ಲ. 1,000 ಕ್ಕೂ ಗ್ರಾಮಗಳಲ್ಲಿ ಸ್ಮಶಾನವಿಲ್ಲ, ಸರ್ಕಾರದ ಜಾಗವಿಲ್ಲದಿದ್ದರೆ ಖಾಸಗಿಯವರಿಂದ ಜಮೀನು ಪಡೆಯುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ನಿರ್ದೇಶದ ಮೇರೆಗೆ  ಇಲಾಖೆಯ ಅಧೀನ ಕಾರ್ಯದರ್ಶಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 

ಸಾರ್ವಜನಿಕ ಕೆಲಸಗಳಿಗೆ ಮಾರ್ಗದರ್ಶಿ ಮೌಲ್ಯದ ಮೂರು ಪಟ್ಟು ಹೆಚ್ಚಿನ ಹಣ ಪಾವತಿಸಿ ಭೂಮಿ ಖರೀದಿಸಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಜನಸಂಖ್ಯೆ ಆಧಾರದ ಮೇಲೆ ಭೂಮಿ ಖರೀದಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

 ಬೆಂಗಳೂರಿನಲ್ಲಿಯೂ ಸ್ಮಶಾನದ ಕೊರತೆಯಿದೆ. 1.3 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಕೇವಲ 132 ಸ್ಮಶಾನಗಳಿಗೆ. ಜನಸಂಖ್ಯೆ ಹೆಚ್ಚಳದಿಂದ ಕಳೆದ ಎರಡು ದಶಕಗಳಿಂದ ಯಾವುದೇ ಹೊಸ ಸ್ಮಶಾನ ಮಾಡಿಲ್ಲ. 

SCROLL FOR NEXT