ರಾಜ್ಯ

ಸುರತ್ಕಲ್ ಫಾಜಿಲ್ ಕೊಲೆ: 4 ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ; ಹಲವು ಆಯಾಮಗಳಲ್ಲಿ ತನಿಖೆ

Srinivasamurthy VN

ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣ ಕೋಮು ದ್ವೇಷದಿಂದಲ್ಲ ಬದಲಿಗೆ ಪ್ರೀತಿ-ಪ್ರೇಮ ವಿಚಾರದಲ್ಲಿ ಉಂಟಾದ ಸಂಘರ್ಷದ ಕೊಲೆ ಎಂಬ ವಿಚಾರ ಚರ್ಚೆಯಾಗುತ್ತಿದೆ.

ಹೌದು.. ನಗರದ ಹೊರವಲಯದ ಸುರತ್ಕಲ್ ನಲ್ಲಿ ಫಾಜಿಲ್ ಎಂಬ ಯುವಕನ ಬರ್ಬರ ಹತ್ಯೆ ವಿಚಾರ ಹಲವು ಆಯಾಮಗಳನ್ನು ಪಡೆಯುತ್ತಿದ್ದು, ಕೊಲೆಯಾದ ಬೆನ್ನಲ್ಲೇ ಇದು ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಫಾಜಿಲ್ ಕೊಲೆ ನಡೆದ ಕಾರಣ ಇದೊಂದು ಪ್ರತೀಕಾರದ ಕೊಲೆ ಎಂದು ಕೆಲ ರಾಜಕಾರಣಿಗಳು ಹೇಳಿಕೆ ನೀಡಿದ್ದಾರೆ. ಮಾಜಿ ಶಾಸಕ ಮೊಯಿದ್ದಿನ್ ಭಾವಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿ, ಇದು ಮೊನ್ನೆಯ ಕೊಲೆಗೆ ಪ್ರತಿಕಾರದಂತೆ ಕಾಣುತ್ತಿದೆ. ಪ್ರವೀಣ್ ಕೊಲೆಗೆ ಈ ಕೊಲೆಯು ಪ್ರತಿಕಾರದಂತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಇದರ ಬೆನ್ನಲ್ಲೇ ಇದೀಗ ಮೃತ ಫಾಜಿಲ್ ಆಪ್ತರೇ ಇದು ಕೋಮು ದ್ವೇಷವಲ್ಲ, ಪ್ರೀತಿ ವಿಷಯದಲ್ಲಿ ಉಂಟಾದ ಗಲಾಟೆಯಾಗಿರಬಹುದು ಎಂದು ಶಂಕಿಸಿದ್ದಾರೆ. 

ಅಂತೆಯೇ ಪೊಲೀಸರಿಗೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಈ ಕೊಲೆಯ ಹಿಂದೆ ಯಾವುದೇ ಕೋಮು ದ್ವೇಷವಿಲ್ಲ ಮತ್ತು ಇದು ಪ್ರತೀಕಾರದ ಕೊಲೆ ಅಲ್ಲ ಎನ್ನಲಾಗಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಗಳು ಸಿಕ್ಕಿಲ್ಲ. ಎರಡು ಗುಂಪುಗಳ ನಡುವೆ ಪ್ರೀತಿಯ ವಿಚಾರಕ್ಕಾಗಿ ದ್ವೇಷವಿತ್ತು, ಜಿಲ್ಲೆಯ ಉದ್ವಿಗ್ನ ಸ್ಥಿತಿ ಲಾಭ ಪಡೆಯಲು ಯತ್ನಿಸಿರುವ ದುಷ್ಕರ್ಮಿಗಳು ಈ ಕೊಲೆಯನ್ನು ಕೋಮು ದ್ವೇಷಕ್ಕೆ ಸಂಪರ್ಕಿಸುವ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರ ತನಿಖೆಯ ಬಳಿಕವೇ ಸ್ಪಷ್ಟ ಮಾಹಿತಿ ಹೊರ ಬರಲಿದೆ.

ಮತ್ತೊಂದು ಮಾಹಿತಿಯ ಪ್ರಕಾರ ಹಣಕಾಸು ವಿಚಾರದಲ್ಲಿ ಈ ಕೊಲೆ ನಡೆದಿದೆ ಅನ್ನುವ ಮಾಹಿತಿಯೂ ಲಭ್ಯವಾಗಿದ್ದು, ಈ ಬಗ್ಗೆ ಪೊಲೀಸ್ ತನಿಖೆ ಬಳಿಕ ನಿಖರ ಮಾಹಿತಿ ದೊರೆಯಲಿದೆ. ಫಾಜಿಲ್ ನನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ಪ್ರತ್ಯಕ್ಷದರ್ಶಿಗಳು ಕೊಟ್ಟ ಸುಳಿವು ಮತ್ತು ಕಾರಿನ ಸಂಖ್ಯೆ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಮಾಧ್ಯಮ‌ ಪ್ರಕಟಣೆ ಹೊರಡಿಸಿದ ಗೃಹ ಸಚಿವ ಆರದ ಜ್ಞಾನೇಂದ್ರ
ಇನ್ನು ಫಾಜಿಲ್ ಹತ್ಯೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಮಾಧ್ಯಮ‌ ಪ್ರಕಟಣೆ ಹೊರಡಿಸಿದ್ದು ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಂತೆಯೇ ಜನತೆ ಶಾಂತಿಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ನಡೆದಿದೆ. ಫಾಜಿಲ್ ಅಮಾನುಷ ಕೊಲೆಯನ್ನ ಅತ್ಯುಗ್ರವಾಗಿ ಖಂಡಿಸುತ್ತೇನೆ. ದುಷ್ಕೃತ್ಯ ನಡೆಸಿದವರನ್ನು ಬಂಧಿಸಿ ಕ್ರಮಕೈಗೊಳ್ಳಲು ಪೊಲೀಸರು ಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ. ಜನತೆ ಶಾಂತಿಯಿಂದ ಸಹಕರಿಸಬೇಕು ಎಂದು ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ‌ ಪ್ರಕಟಣೆ ಹೊರಡಿಸಿದ್ದಾರೆ. 

SCROLL FOR NEXT