ರಾಜ್ಯ

ಆಧುನಿಕ ತಂತ್ರಜ್ಞಾನ ಬಳಸಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ: ಮುಖ್ಯಮಂತ್ರಿ ಬೊಮ್ಮಾಯಿ

Sumana Upadhyaya

ಬೆಂಗಳೂರು: ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ವಿಶೇಷವಾಗಿ ನಾಯಿ ಮನುಷ್ಯನನ್ನು ಅತ್ಯಂತ ಪ್ರೀತಿ ಮಾಡುವ ಪ್ರಾಣಿ. ಮನುಷ್ಯ-ಪ್ರಾಣಿಗಳ ನಡುವಿನ ಸಂಬಂಧವನ್ನು ಅತ್ಯಂತ ಮಾರ್ಮಿಕವಾಗಿ, ಸೂಕ್ಷ್ಮವಾಗಿ, ಭಾವನಾತ್ಮಕವಾಗಿ 777 ಚಾರ್ಲಿ ಸಿನಿಮಾದ ನಿರ್ದೇಶಕರು ತೋರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ನಿನ್ನೆ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಕಿರಣ್ ರಾಜ್ ನಿರ್ದೇಶನದ ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ವೀಕ್ಷಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 

ಪ್ರಾಣಿಗಳನ್ನು ಹಿಂಸಿಸಬಾರದು, ಪ್ರಾಣಿಗಳನ್ನು ರಕ್ಷಣೆ ಮಾಡಬೇಕು, ಸಾಧ್ಯವಿದ್ದರೆ ದತ್ತು ತೆಗೆದುಕೊಂಡು ಸಾಕಿದರೆ ಬಹಳ ಉಪಕಾರವಾಗುತ್ತದೆ. ಅವುಗಳಿಂದ ಹೆಚ್ಚು ಪ್ರೀತಿ, ಸಂತೋಷ, ನೆಮ್ಮದಿ ಸಿಗುತ್ತದೆ ಎಂದು ಮನೋಜ್ಞವಾದ ಕಥೆಯನ್ನು ತೋರಿಸಿದ್ದಾರೆ. ರಕ್ಷಿತ್ ಶೆಟ್ಟಿ ಪಾತ್ರ ಬಹಳ ಸೊಗಸಾಗಿದೆ ಎಂದರು.

ಈ ಚಿತ್ರವನ್ನು ಎಲ್ಲರೂ ಕೂಡ ನೋಡಬೇಕು ಎಂದರು. ನಾಯಿಗಳನ್ನು ದತ್ತು ತೆಗೆದುಕೊಂಡು ನೋಡಿಕೊಳ್ಳುವ, ಸಾಕಿ ಸಲಹುವ ಕೇಂದ್ರಗಳಿಗೆ ವಿಶೇಷ ಮನ್ನಣೆಯನ್ನು ಸರ್ಕಾರ ನೀಡಲಿದೆ. ಬೀದಿ ನಾಯಿಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಸರಿಯಾಗಿ ಸಾಕಿ ಸಲಹುವ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಹಿನ್ನೆಡೆಯಾಗಿದ್ದ ಕನ್ನಡ ಚಿತ್ರರಂಗ ಈಗ ಮತ್ತೆ ಪುಟಿದೆದ್ದಿದೆ. ಕನ್ನಡ ಚಿತ್ರರಂಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಬಹಳಷ್ಟು ಸಾಧನೆಗಳನ್ನು ಮಾಡುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆಯಿದೆ. ಬರುವ ದಿನಗಳಲ್ಲಿ ಕನ್ನಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ದೊಡ್ಡ ಹೆಸರು ಮಾಡುತ್ತದೆ ಎಂದರು.

ಮೈಸೂರಿನಲ್ಲಿ ಫಿಲ್ಮ್ ಸಿಟಿ: ಫಿಲ್ಮ್ ಸಿಟಿ ನಿರ್ಮಾಣ ಮಾಡಲು ಮೈಸೂರಿನಲ್ಲಿ ಜಾಗವಿದೆ. ಸಂಬಂಧಪಟ್ಟವರಿಗೆ ಈಗಾಗಲೇ ತಿಳಿಸಿದ್ದೇನೆ. ಇಂದಿನ ಮತ್ತು ಮುಂದಿನ ತಂತ್ರಜ್ಞಾನ ನೋಡಿಕೊಂಡು ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುವುದು. ಸರ್ಕಾರದ ಜೊತೆ ಆಸಕ್ತರ ಸಹಾಯವನ್ನು ಬಳಸಿಕೊಂಡು ಜಂಟಿಯಾಗಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲಾಗುವುದು ಎಂದರು.

SCROLL FOR NEXT