ರಾಜ್ಯ

ವಿಶ್ವ ಯೋಗ ದಿನಾಚರಣೆ ವೇಳೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಬೆಂಗಳೂರಿಗೆ ಬಂದು ರಸ್ತೆ ಗುಂಡಿ ವೀಕ್ಷಿಸುವಂತೆ ಆಪ್ ಆಗ್ರಹ

Manjula VN

ಬೆಂಗಳೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೂ ಬಂದು, ರಸ್ತೆಗುಂಡಿಗಳನ್ನು ವೀಕ್ಷಿಸಬೇಕೆಂದು ಆಮ್‌ ಆದ್ಮಿ ಪಕ್ಷ ಆಗ್ರಹಿಸಿದೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ, “ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ರಸ್ತೆ ಗುಂಡಿಗಳ ದರ್ಶನ ಪಡೆಯಬೇಕೆಂದು ಆಗ್ರಹಿಸಿ ಪೋಸ್ಟ್‌ ಕಾರ್ಡ್‌ ಚಳವಳಿ ಹಮ್ಮಿಕೊಂಡಿದ್ದೇವೆ. ಜೂನ್‌ 17ರ ಶುಕ್ರವಾರದಂದು ಪಕ್ಷದ ಕಾರ್ಯಕರ್ತರು ರಸ್ತೆಗುಂಡಿಗಳ ಬಳಿ ವಾಹನ ಸವಾರರೊಂದಿಗೆ ಮಾತನಾಡಿ, ʻಪ್ರಧಾನಿಗಳೇ ಬೆಂಗಳೂರಿನ ರಸ್ತೆ ಗುಂಡಿಗಳ ಸೊಬಗನ್ನು ನೋಡಬನ್ನಿʼ ಎಂದು ಬರೆದಿರುವ ಪೋಸ್ಟ್‌ಕಾರ್ಡ್‌ಗಳನ್ನು ನೀಡಲಿದ್ದಾರೆ. ಇದನ್ನು ವಾಹನ ಸವಾರರು ಪ್ರಧಾನಿಗೆ ಕಳುಹಿಸಲಿದ್ದಾರೆ” ಎಂದು ಹೇಳಿದರು.

ಬೆಂಗಳೂರಿನ ರಸ್ತೆಗಳಿಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಕಳೆದ ಐದು ವರ್ಷಗಳಲ್ಲಿ ರೂ.20 ಸಾವಿರ ಕೋಟಿಗೂ  ಹೆಚ್ಚು ಮೊತ್ತ ಬಿಡುಗಡೆಯಾಗಿದೆ. ಬಿಜೆಪಿಯ ಭ್ರಷ್ಟಾಚಾರದಿಂದಾಗಿ ಆ ಹಣವು ಜನಪ್ರತಿನಿಧಿಗಳ ಜೇಬು ಸೇರಿ, ರಸ್ತೆಗಳ ತುಂಬಾ ಗುಂಡಿಗಳಾಗಿವೆ. ಇದರ ವಿರುದ್ಧ ಆಮ್‌ ಆದ್ಮಿ ಪಾರ್ಟಿಯು ನಿರಂತರವಾಗಿ ಪ್ರತಿಭಟನೆ, ಅಭಿಯಾನಗಳನ್ನು ಮಾಡಿ, ಸುಮಾರು 70ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದೆ. ಆದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಗುಂಡಿಗಳಿಂದ ಅಪಘಾತ ಸಾಮಾನ್ಯವಾಗಿದ್ದು, ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಸೌಜನ್ಯವೂ ಈ ಸರ್ಕಾರಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

SCROLL FOR NEXT