ರಾಜ್ಯ

ರಾಹುಲ್ ಗಾಂಧಿ ಇಡಿ ವಿಚಾರಣೆಗೆ ವಿರೋಧ: ಕಾಂಗ್ರೆಸ್ ರಾಜಭವನ ಚಲೋ ಆರಂಭ, ಜನತೆಗೆ ಟ್ರಾಫಿಕ್ ಜಾಮ್ ಬಿಸಿ

Manjula VN

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ರಾಜ್ಯದ ಕಾಂಗ್ರೆಸ್ ನಾಯಕರು ಗುರುವಾರ ರಾಜಭವನ ಚಲೋ ಪ್ರತಿಭಟನಾ ರ್ಯಾಲಿ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಿದೆ.

ಬೆಳಿಗ್ಗೆ 11.15ರ ವೇಳೆಗೆ ಕೆಪಿಸಿಸಿ ಕಚೇರಿಯಿಂದ ಕಾಂಗ್ರೆಸ್ ನಾಯಕರು ಹಾಗೂ ಭಾರೀ ಸಂಖ್ಯೆಯ ಕಾರ್ಯಕರ್ತರು ರಾಜ್ ಭವನ್ ಚಲೋ ರ್ಯಾಲಿ ಆರಂಭಿಸಿದ್ದಾರೆ.

ರ್ಯಾಲಿಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದರು ಮತ್ತು ಶಾಸಕರು ಸೇರಿದಂತೆ ಪಕ್ಷದ ಹಲವು ಮುಖಂಡರು ಭಾಗಿಯಾಗಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕ್ವೀನ್ಸ್‌‌ ರೋಡ್‌- ಇಂಡಿಯನ್ ಎಕ್ಸ್‌ ಪ್ರೆಸ್, ಜಿಪಿಓ‌ ಸಿಗ್ನಲ್, ಕ್ವೀನ್ಸ್ ರೋಡ್, ಇಂಡಿಯನ್ ಎಕ್ಸ್ ಪ್ರೆಸ್, ವಸಂತ‌ನಗರ, ಶಿವಾಜಿನಗರ, ಕೋಲ್ಸ್‌ಪಾರ್ಕ್‌, ನಂದಿ‌ದುರ್ಗ ‌ರಸ್ತೆ, ವಿಧಾನಸೌಧ, ಕೆ ಆರ್ ಸರ್ಕಲ್‌‌ ಸೇರಿದಂತೆ‌ ಬೆಂಗಳೂರಿನ ಹೃದಯ ಭಾಗದಲ್ಲಿ‌ ಸಂಚಾರ ದಟ್ಟಣೆ ಎದುರಾಗಿದೆ ಎಂದು ತಿಳಿದುಬಂದಿದೆ.

ರಾಜಭವನದ ಬಳಿ ಬಿಗಿ ಭದ್ರತೆ
ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜಭವನದ ಎದುರು ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

SCROLL FOR NEXT