ರಾಜ್ಯ

ಕೊರೋನಾ ಸೋಂಕು ಹೆಚ್ಚುತ್ತಿರುವಾಗ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ನಾಯಕರ ನಡವಳಿಕೆ ನಾಚಿಕೆಗೇಡಿನ ಸಂಗತಿ: ಡಾ ಕೆ ಸುಧಾಕರ್

Sumana Upadhyaya

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಜಾಸ್ತಿಯಾಗುತ್ತಿದೆ, ಹೀಗಿರುವಾಗ ಕಾಂಗ್ರೆಸ್ ನಾಯಕರು ಜನರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುತ್ತಿರುವುದು ಎಷ್ಟು ಸರಿ, ನಾಚಿಕೆಯಾಗಬೇಕು ಕಾಂಗ್ರೆಸ್ ನಾಯಕರಿಗೆ, ಪ್ರತಿಭಟನೆ, ರ್ಯಾಲಿ ಮಾಡಲು ಅವಕಾಶವಿಲ್ಲ, ಬೇಕಿದ್ದರೆ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ಮಾಡಲಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಂದೆಡೆ ವಿಧಾನಸೌಧ, ಸಂವಿಧಾನದ ಬಗ್ಗೆ ಮಾತನಾಡುತ್ತಾರೆ, ಇನ್ನೊಂದೆಡೆ ಸಂವಿಧಾನಕ್ಕೆ ಅಗೌರವ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಪಿ ವಿ ನರಸಿಂಹ ರಾವ್, ಸೀತಾರಾಮ್ ಕೇಸರಿ, ಮಲ್ಲಿಕಾರ್ಜುನ ಖರ್ಗೆಯವರನ್ನು ವಿಚಾರಣೆ ಮಾಡಿರಲಿಲ್ಲವೇ, ಆಗ ಸುಮ್ಮನಿದ್ದವರು ಈಗ ರಾಹುಲ್ ಗಾಂಧಿಯವರನ್ನು ಇಡಿ ವಿಚಾರಣೆ ಮಾಡುತ್ತಿರುವಾಗ ಏಕೆ ಇಷ್ಟೊಂದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಳಿದರು.

ವಿಚಾರಣೆಯಾಗಲಿ, ಸತ್ಯ ಹೊರಗೆ ಬರಲಿ, ಈ ರೀತಿ ಪ್ರತಿಭಟನೆ ಮಾಡುತ್ತಿರುವುದರಿಂದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದಿದ್ದಾರೆ.

ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿರುವಾಗ ಅಡ್ಡಿಪಡಿಸುವುದು ಸಂವಿಧಾನ ವಿರೋಧಿ ನಡೆಯಲ್ಲವೇ ಎಂದು ಡಾ ಸುಧಾಕರ್ ಪ್ರಶ್ನಿಸಿದ್ದಾರೆ. 

SCROLL FOR NEXT