ರಾಜ್ಯ

ದ್ವಿತೀಯ ಪಿಯು ಫಲಿತಾಂಶ: ರಾಜ್ಯದಲ್ಲಿ 3 ವಿದ್ಯಾರ್ಥಿಗಳ ಆತ್ಮಹತ್ಯೆ!

Srinivasamurthy VN

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನಲೆಯಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣ ಹಿನ್ನೆಲೆ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ‌ ಕಡ್ಲೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಪ್ರಣಮ್ ಈಶ್ವರ್ ನಾಯ್ಕ(18)  ಎಂದು ತಿಳಿದುಬಂದಿದೆ. ಎ.ವಿ. ಬಾಳಿಗ ಕಾಲೇಜಿನಲ್ಲಿ  ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದ, ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು  ಅನುತ್ತೀರ್ಣ ಹಿನ್ನೆಲೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಕುಮಟಾ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ವಿಜಯನಗರ ಜಿಲ್ಲೆಯ ಗರಗ ಗ್ರಾಮದಲ್ಲಿ ಶ್ಯಾಮ ರಾಜ್ ಎಂಬ ವಿದ್ಯಾರ್ಥಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲಾಗಿದ್ದ. ಇದು ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ವಿದ್ಯಾರ್ಥಿನಿ ಆತ್ಮಹತ್ಯೆ
ಇತ್ತ ಗದಗದಲ್ಲೂ ಇಂತಹುದೇ ಘಟನೆ ವರದಿಯಾಗಿದ್ದು, ಪಿಯುಸಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಮಾರ್ಗ ಮಧ್ಯೆ ಸಾವನ್ನಪ್ಪಿದ ಘಟನೆ ನಡೆದಿದೆ. ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪವಿತ್ರಾ ಲಿಂಗದಾಳ (18) ಗದಗ ಜಿಮ್ಸ್  ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ  ಸಾವನ್ನಪ್ಪಿದ್ದಾಳೆ. ಗದಗ ತಾಲೂಕಿನ ಹರ್ತಿ ಗ್ರಾಮದವಳಾಗಿರುವ ಪವಿತ್ರಾ ಲಿಂಗದಾಳ.  ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ ಫೇಲ್ ಆಗಿದ್ದಳು. ವಿಷಯ ತಿಳಿದು ತೀವ್ರವಾಗಿ ನೊಂದಿದ್ದ ಪವಿತ್ರಾ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಪವಿತ್ರಾಳನ್ನ ರಕ್ಷಿಸಿ ಜಿಮ್ಸ್ ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ದಾರಿ ಮಧ್ಯೆ ಪವಿತ್ರಾ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಈ ಬಾರಿ ದ್ವಿತೀಯ ಪಿಯುಸಿಯಲ್ಲಿ 61.88% ಫಲಿತಾಂಶ ಬಂದಿದ್ದು, ಉತ್ತರ ಕನ್ನಡ ಶೇ. 72.01 ಫಲಿತಾಂಶದ ಮೂಲಕ 5 ನೇ ಸ್ಥಾನ ಪಡೆದುಕೊಂಡಿದೆ.  ಗದಗ ಜಿಲ್ಲೆ ಈ ಬಾರಿ ಶೇ.60.63 ಫಲಿತಾಂಶ ಪಡೆದು 22 ನೇ ಸ್ಥಾನದಲ್ಲಿದೆ.

SCROLL FOR NEXT