ರಾಜ್ಯ

ಬೆಂಗಳೂರಿನಲ್ಲಿ ಹೊರಹೊಮ್ಮುತ್ತಿರುವ ಹೊಸ ಒಮಿಕ್ರಾನ್ ಉಪತಳಿಗಳು, ಅಧಿಕಾರಿಗಳು ಅಲರ್ಟ್

Nagaraja AB

ಬೆಂಗಳೂರು: ಬೆಂಗಳೂರಿನಲ್ಲಿ ಒಮಿಕ್ರಾನ್ ಬಿಎ.3, ಬಿಎ.4 ಮತ್ತು ಬಿಎ.5 ಹೊಸ ಉಪ ತಳಿಗಳು ವರದಿಯಾಗಿದ್ದು, ಆರೋಗ್ಯ ಇಲಾಖೆ ಕಣ್ಗಾವಲು ಹೆಚ್ಚಿಸಿದೆ. 

ಐಎಲ್ ಐ/ SARI ಪ್ರಕರಣಗಳ ಪರೀಕ್ಷೆಯನ್ನು ತೀವ್ರಗೊಳಿಸಲಾಗಿದೆ. ವಿಶೇಷವಾಗಿ ಹೆಚ್ಚಿನ ಅಪಾಯವಿರುವ ಗುಂಪು ಮತ್ತು ಸಹ ಅಸ್ವಸ್ಥತೆ ಹೊಂದಿರುವವರ ಕಡೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ಕೇಸ್ ಗಳು ಮತ್ತು ಎಲ್ಲಾ ಪಾಸಿಟಿವ್ ಕೇಸ್ ಗಳನ್ನು ಪರೀಕ್ಷಿಸಲಾಗುವುದು ಎಂದು ಆರೋಗ್ಯ ಆಯುಕ್ತ ಡಿ ರಂದೀಪ್ ಹೇಳಿದ್ದಾರೆ.

ಮುಂಬೈ ಮತ್ತು ದೆಹಲಿಯ ನಂತರ ಬೆಂಗಳೂರು ದೇಶದ ಮೂರನೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು (4,665) ಹೊಂದಿದ್ದರೂ, ಇಲ್ಲಿನ ಜನರು ಇನ್ನೂ ಮೂರನೇ ಡೋಸ್ ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. 18 ರಿಂದ 59 ವಯೋಮಾನದವರಲ್ಲಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರಲ್ಲಿ ಶೇ.3.19ರಷ್ಟು ಮಂದಿ ಮಾತ್ರ ಮುನ್ನೆಚ್ಚರಿಕೆ ಡೋಸ್ ತೆಗೆದುಕೊಂಡಿದ್ದರೆ, 60 ವರ್ಷ ಮೇಲ್ಪಟ್ಟವರಲ್ಲಿ ಶೇ.35.41ರಷ್ಟು ಮಂದಿ ಮಾತ್ರ ಮೂರನೇ ಡೋಸ್ ಪಡೆದಿದ್ದಾರೆ. 

ಒಟ್ಟಾರೆಯಾಗಿ, 18 ವರ್ಷಕ್ಕಿಂತ ಮೇಲ್ಪಟ್ಟ 91.7 ಲಕ್ಷ ಜನರಲ್ಲಿ, ಶೇಕಡಾ 98 ರಷ್ಟು ಜನರು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಶೇಕಡಾ  96 ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದರೆ ಕೇವಲ ಶೇಕಡಾ 8.67 ರಷ್ಟು ಜನರು ಮಾತ್ರ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. 

ಪರೀಕ್ಷಾ ಗುರಿಗಳಿಗೆ ಸಂಬಂಧಿಸಿದಂತೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯು ಮಾಡಿದ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ, ಮಾಸ್ಕ್ ನಿಯಮವನ್ನು ಜಾರಿಗೆ ತರಲು ಮತ್ತು ಮುನ್ನೆಚ್ಚರಿಕೆಯ ಡೋಸ್ ವ್ಯಾಕ್ಸಿನೇಷನ್ ಅನ್ನು ವೇಗಗೊಳಿಸಲು ನವೀನ ಅಭಿಯಾನಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

SCROLL FOR NEXT