ರಾಜ್ಯ

ಸೋಂಕು ಕಂಡು ಬಂದರೆ ಶಾಲಾ, ಕಾಲೇಜು ಮುಚ್ಚುವ ಅಗತ್ಯವಿಲ್ಲ: ಆರೋಗ್ಯ ಇಲಾಖೆಯಿಂದ ಪರಿಷೃತ ಮಾರ್ಗಸೂಚಿ ಪ್ರಕಟ

Manjula VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನ ಕಳೆಯುತ್ತಿದ್ದಂತೆ ಮಹಾಮಾರಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಕ್ಷಣಗಳಿರುವವರನ್ನು ಶಾಲೆ, ಕಾಲೇಜು ಮತ್ತು ಕಚೇರಿಗೆ ಹಾಜರಾಗದಂತೆ ಸೂಚಿಸಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನೊಳಗೊಂಡ ಮಾರ್ಗಸೂಚಿಯನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಹೊರಡಿಸಿದೆ. 

ನಗರ ವ್ಯಾಪ್ತಿಗೆ ಅನ್ವಯಿಸಿ ಶಿಕ್ಷಣ ಸಂಸ್ಥೆ, ಕಾಲೇಜು ಹಾಗೂ ಅಪಾರ್ಟ್'ಮೆಂಟ್ ಗಲಲ್ಲಿ ಕೋವಿಡ್ ಪರೀಕ್ಷೆ, ಚಿಕಿತ್ಸೆ, ಕ್ವಾರಂಟೈನ್, ಪ್ರವೇಶ ಕುರಿತ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. 

ಸೋಂಕು ಕಂಡು ಬಂದರೆ ಶಾಲೆಗಳನ್ನು ಮುಚ್ಚುವ ಅಥವಾ ಅಪಾರ್ಟ್'ಮೆಂಟ್ ಗಳನ್ನು ಸೀಲ್ ಡೌನ್ ಮಾಡುವ ಅಗತ್ಯವಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 

ಶಾಲೆಗಳಲ್ಲಿ ಸೋಂಕು ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಗೆ ಹಾಜರಾಗದಂತೆ ಸೂಚಿಸಬೇಕು. ಲಕ್ಷಣ ಹೊಂದಿರುವವರನ್ನು ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟಲ್ಲಿ ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್, ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಬೇಕು.

ವರದಿ ನೆಗೆಟಿವ್ ಬಂದರಲ್ಲಿ ಆರ್'ಟಿಪಿಸಿಆರ್ ಮಾದರಿ ಪರೀಕ್ಷೆ ವರದಿ ಬರುವವರೆಗೂ ನಿಗಾದಲ್ಲಿ ಇರಿಸಿ ನಂತರ ಕ್ರಮ ಕೈಗೊಳ್ಳಬೇಕು. ಆರ್'ಟಿಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟು ಸಿಟಿ ವ್ಯಾಲ್ಯೂ 25 ಇದ್ದಲ್ಲಿ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಬೇಕೆಂದು ತಿಳಿಸಲಾಗಿದೆ. 

ಕಾಲೇಜು ಮತ್ತು ಕಚೇರಿಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಲಕ್ಷಣಗಳು ಕಂಡು ಬಂದರಲ್ಲಿ ರ್ಯಾಪಿಡ್ ಆ್ಯಂಡಿಜೆನ್ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟರೆ ಕೋವಿಡ್ ನಿಯಮ ಪಾಲಿಸಬೇಕು. ಶಾಲಾ-ಕಾಲೇಜುಗಳಲ್ಲಿ ಪ್ರಕರಣ ವರದಿಯಾದ ಕೊಠಡಿಗಳನ್ನು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು. ಮರುದಿನ ಕೊಠಡಿ ಬಳಕೆ ಮಾಡಬೇಕು. 

ಅಪಾರ್ಟ್'ಮೆಂಟ್ ಗಳಲ್ಲಿ 3-5 ಪ್ರಕರಣಗಳು ವರದಿಯಾದಲ್ಲಿ ಸಣ್ಣ ಕ್ಲಸ್ಟರ್ ಎಂದು ಪರಿಗಣಿಸಿ ಹಾಗೂ 5ಕ್ಕಿಂತ ಹೆಚ್ಚು ಕೇಸ್ ವರದಿಯಾದಲ್ಲಿ ದೊಡ್ಡ ಕ್ಲಸ್ಟರ್ ಎಂದು ಪರಿಗಣಿಸಿ ನಿರ್ದಿಷ್ಟ ಬ್ಲಾಕ್'ನ ಫ್ಲೋರ್ ನಲ್ಲಿ ಸೋಂಕು ಲಕ್ಷಣ ಹೊಂದಿರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕು. 

15ಕ್ಕಿಂತ ಹೆಚ್ಚು ಕೇಸ್ ವರದಿಯಾದಲ್ಲಿ ಸ್ಥಳೀಯ ಆರೋಗ್ಯ ಪ್ರಾಧಿಕಾರದ ನಿರ್ಧಾರದಂತೆ ಇಡೀ ಅಪಾರ್ಟ್'ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಸೋಂಕು ಲಕ್ಷಣ ಹೊಂದಿರುವ ಎಲ್ಲರನ್ನೂ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ದೃಢಪಟ್ಟರೆ ಕೋವಿಡ್ ನಿಯಮದ ಅನ್ವಯ ಚಿಕಿತ್ಸೆ ಒದಗಿಸಬೇಕು. 

SCROLL FOR NEXT