ಮೈಸೂರು: ಹಾಡುಹಗಲೇ ಮೈಸೂರು ಜಿಲ್ಲೆ ಕೆ.ಆರ್. ನಗರದ ಪಟ್ಟಣದಲ್ಲಿ ಚಿರತೆಯೊಂದು ಪ್ರತ್ಯಕ್ಷಗೊಂಡು ಜನರ ಮೇಲೆ ಎರಗಿರುವ ವೀಡಿಯೋ ವೈರಲ್ ಆಗಿದೆ.
ಕೆ.ಆರ್.ನಗರ ಪಟ್ಟಣದ ಹೊರವಲಯದಲ್ಲಿರುವ ಕನಕ ನಗರದಲ್ಲಿ ಶುಕ್ರವಾರ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದ್ದು, ಕೆಲವರ ಮೇಲೆ ದಾಳಿ ನಡೆಸಿದೆ. ಮುಳ್ಳೂರು ರಸ್ತೆ ಬಳಿಯ ರಾಜ ಪ್ರಕಾಶ್ ಶಾಲೆಯ ಹತ್ತಿರ ಬೀದಿನಾಯಿಯನ್ನು ಬೆನ್ನಟ್ಟಿಕೊಂಡು ಹೋದ ಚಿರತೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆ ಎರಗಿದೆ. ಆನಂತರ ಮತ್ತಿಬ್ಬರ ಮೇಲೂ ದಾಳಿ ನಡೆಸಿದೆ. ಪಟ್ಟಣದ ಕನಕನಗರ ನಿವಾಸಿಗಳಾದ ವೆಂಕಟೇಶ್, ಕರಿಗೌಡ, ಪರಶಿವ ಮತ್ತು ಚಿರತೆ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮಂಜು ಗಾಯಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದರು. ಬಳಿಕ ಅದನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಜನರಲ್ಲಿ ಭಯ ಉಂಟು ಮಾಡುತ್ತಿತ್ತು, ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೂ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಅಲ್ಲಗಳೆದಿದ್ದರು.
ಗುರುವಾರ ಸಂಜೆ ಸುಮಾರು 7ಗಂಟೆಯಲ್ಲಿ ಕಾಲೇಜು ಬಳಿ ಮತ್ತೆ ಕಾಣಿಸಿಕೊಂಡಿದೆ ಎಂದು ಹೇಳಿದಾಗ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿ ರಾತ್ರಿ 10ಗಂಟೆಯವರೆಗೂ ಕಾಲೇಜು ಸುತ್ತ ಜಾಲಾಡಿದ್ದಾರೆ. ಆದರೆ ಚಿರತೆ ಬಗ್ಗೆ ಸುಳಿವು ಸಿಗಲಿಲ್ಲ, ಆದರೂ ಇದೊಂದು ಹುಸಿ ಹೇಳಿಕೆಯಾಗಿರಬಹುದು ಎಂದು ಸುಮ್ಮನಾಗಿದ್ದರು.
ಪಟ್ಟಣದ ಮುಳ್ಳೂರು ರಸ್ತೆ, ರಾಜ್ ಪ್ರಕಾಶ್ ಶಾಲೆ ಬಳಿ ಶುಕ್ರವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಸಾರ್ವಜನಿಕರಿಗೆ ಕಾಣಿಸಿಕೊಂಡ ಚಿರತೆ ಪಟ್ಟಣದ ಕನಕನಗರ ನಿವಾಸಿಗಳಾದ ವೆಂಕಟೇಶ್, ಕರಿಗೌಡ, ಪರಶಿವ ಅವರ ಮೇಲೆ ಎಗರಿ ಗಾಯಗೊಳಿಸಿದೆ, ಚಿರತೆ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮಂಜು ಅವರ ಮೇಲೂ ದಾಳಿ ಮಾಡಿದೆ.