ರಾಜ್ಯ

ಬೆಂಗಳೂರು: ನಕಲಿ ಗುರುತಿನ ಚೀಟಿ ಸೃಷ್ಟಿಸಿ ಪಾಸ್‌ಪೋರ್ಟ್‌ ಪಡೆದಿದ್ದ 9 ಮಂದಿ ಬಂಧನ!

Manjula VN

ಬೆಂಗಳೂರು: ವಿದೇಶಿ ಪ್ರಜೆಗಳು ಮತ್ತು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ಪಡೆಯಲು ಏಜೆಂಟ್‌ಗಳು ಸಹಾಯ ಮಾಡುತ್ತಿದ್ದ ದಂಧೆಯೊಂದನ್ನು ಬಸವನಗುಡಿ ಪೊಲೀಸರು ಭೇದಿಸಿದ್ದಾರೆ.

ಪ್ರಕರಣ ಸಂಬಂಧ ಅಧಿಕಾರಿಗಳು ಶ್ರೀಲಂಕಾ ಮೂಲದ ಐವರು ಹಾಗೂ ನಾಲ್ವರು ಏಜೆಂಟ್'ಗಳು ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

2020 ಡಿಸೆಂಬರ್ ತಿಂಗಳಿನಲ್ಲಿ ಮೊಹಮ್ಮದ್ ಕರೀಂ ಎಂಬ ಹಸರಿನಲ್ಲಿ ಪೊಲೀಸ್ ವಿರಿಫಿಕೇಷನ್'ಗೆ ಅರ್ಜಿಯೊಂದು ಬಂದಿತ್ತು, ಅರ್ಜಿಯನ್ನು ಪರಿಶೀಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸರು ಬಸವನಗುಡಿ ಪೊಲೀಸರನ್ನು ಸಂಪರ್ಕಿಸಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಾದಿಕ್ ಪಾಶಾ ಬಗ್ಗೆ ಮಾಹಿತಿ ಕೇಳಿದ್ದರು. ಈ ವೇಳೆ ಮೊಹಮ್ಮದ್ ಕರೀಂ ಹಾಗೂ ಸಾದಿಕ್ ಪಾಷಾ ಫೋಟೋ ಹೊಂದಿಕೆಯಾಗಿತ್ತು. ಅಕ್ಟೋಬರ್ 19 ರಂದು ನಾಲ್ವರ ವಿರುದ್ಧ ಹೊಸದಾಕಿ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.

ಪೊಲೀಸ್ ವಿರಿಫಿಕೇಷನ್'ಗೆ ಅರ್ಜಿಯಲ್ಲಿ ಒದಗಿಸಲಾದ ವಿವರಗಳ ಆಧಾರದ ಮೇಲೆ, ಪಾಸ್‌ಪೋರ್ಟ್ ಏಜೆಂಟ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ಇದರಂತೆ ಬೆಂಗಳೂರು ಮತ್ತು ಮಂಗಳೂರಿನ ತಲಾ ಇಬ್ಬರು ನಿವಾಸಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ನಾಲ್ವರ ಪೈಕಿ ಒಬ್ಬರ ವಿರುದ್ಧ 7 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಈ ಹಿಂದೆ ಕೂಡ ಈತನ ಬಂಧನವಾಗಿತ್ತು.

ವಿಚಾರಣೆ ನಡೆಸಿದಾಗ, ಆರೋಪಿಗಳು ನಕಲಿ ಆಧಾಕರ್ ಕಾರ್ಡ್, ವೋಟರ್ ಐಡಿ ಹಾಗೂ ಜನ್ಮ ದಿನಾಂಕದ ಪುರಾವೆಯಾಗಿ ಶಾಲಾ ವರ್ಗಾವಣೆ ಪ್ರಮಾಣಪತ್ರಗಳನ್ನು ಸೃಷ್ಟಿಸಿರುವುದು ಹಾಗೂ ಪಾಸ್ಟ್ ಪೋರ್ಟ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಇದೂವರೆಗೆ 50 ಮಂದಿಗೆ ಸಹಾಯ ಮಾಡಿರುವುದು ಬೆಳಕಿಗೆ ಬಂದಿದೆ.

ಇದಲ್ಲದೆ, ಬಸವನಗುಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 20 ಮಂದಿಗೆ ನಕಲಿ ಐಡಿ ಬಳಸಿ ಪಾಸ್‌ಪೋರ್ಟ್‌ ಪಡೆಯಲು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓರ್ವ ಮಹಿಳೆ ಸೇರಿದಂತೆ ಶ್ರೀಲಂಕಾದ ಐವರು ಭಾರತೀಯ ಪ್ರಜೆಗಳೆಂದು ನಕಲಿ ಐಡಿಗಳನ್ನು ಪಡೆದು ಪಾಸ್ ಪೋರ್ಟ್ ಪಡೆದುಕೊಂಡಿದ್ದಾರೆ. ಈ ಐವರನ್ನೂ ಬಂಧನಕ್ಕೊಳಪಡಿಸಲಾಗಿದೆ. ಐವರೂ ಶ್ರೀಲಂಕಾ ಪಾಸ್ ಪೋರ್ಟ್ ನಿಂದ ಭಾರತಕ್ಕೆ ಬಂದಿದ್ದರು. ಶಿಕ್ಷಕಿ, ವೈದ್ಯಕೀಯ ಸಹಾಯಕ ಮತ್ತು ಚಾಲಕರಾಗಿ ಉದ್ಯೋಗ ಪಡೆದುಕೊಳ್ಳಲು ಫ್ರಾನ್ಸ್'ಗೆ ಹೋಗಲು ಸಿದ್ಧತೆ ನಡೆಸಿದ್ದರು. ಪ್ರಸ್ತುತ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಈ ಸಮಯದಲ್ಲಿ ಫ್ರೆಂಚ್ ವೀಸಾ ಪಡೆಯುವುದು ಕಷ್ಟಕರವಾದ ಹಿನ್ನೆಲೆಯಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿ ಭಾರತೀಯ ಪಾಸ್ ಪೋರ್ಟ್ ಪಡೆದುಕೊಳ್ಳಲು ಮುಂದಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕ್ರಿಮಿನಲ್ ಹಿನ್ನೆಲೆಯುಳ್ಳ 6 ಮಂದಿ ನಕಲಿ ದಾಖಲೆಗಳ ಬಳಸಿ ಪಾಸ್ ಪೋರ್ಟ್ ಪಡೆದುಕೊಂಡು ವಿದೇಶಕ್ಕೆ ಹಾರಿರುವುದು ತನಿಖೆಯಿಂದ ತಿಳಿದುಬಂದಿದೆ. ಚಿಕ್ಕಮಗಳೂರಿನಲ್ಲಿ 36 ಕಳ್ಳತನ ದಾಖಲಾಗಿರುವ ವ್ಯಕ್ತಿ ಹಾಗೂ ಕೊಲ, ದರೋಡೆ ಹಾಗೂ ಸುಲಿಗೆಯಂತಹ 15 ಪ್ರಕರಣಗಳಲ್ಲಿ ಭಾಗಿಯಾಗಿರುವ ಆತನ ಸಹೋದರ ಇಬ್ಬರು ವಿದೇಶಕ್ಕೆ ಹಾರಿದ್ದಾರೆ. ಈ ಸಂಬಂಧ ವಿವರವಾದ ತನಿಖೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT