ರಾಜ್ಯ

ಎರಡೂವರೆ ಗಂಟೆ ಟ್ರಾಫಿಕ್ ಜಾಮ್ ನಿಂದ ಕಂಗೆಟ್ಟ ಮಕ್ಕಳು: ಶಾಲೆ ತಲುಪಲು ಸಾಧ್ಯವಾಗದೆ ಮಕ್ಕಳು ಮನೆಗೆ ವಾಪಸ್; ನಿವಾಸಿಗಳ ಪ್ರತಿಭಟನೆ

Manjula VN

ಬೆಂಗಳೂರು: ಹದಗೆಟ್ಟ ರಸ್ತೆಗಳಿಂದ ತೀವ್ರ ಸಂಚಾರ ದಟ್ಟಣೆ ಎದುರಾಗುತ್ತಿದ್ದು, ಈ ಬೆಳವಣಿಗೆಯು ಶಾಲೆಗೆ ಹೋಗುತ್ತಿರುವ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ಅಪಾರ್ಟ್'ಮೆಂಟ್ ನಿರ್ಮಾಣಕ್ಕೆ ನೀಡಲಾಗುತ್ತಿರುವ ಅನುಮತಿಯನ್ನು ನಿಲ್ಲಿಸಬೇಕೆಂದು ಬಿಬಿಎಂಪಿಗೆ ಬಳಗೆರೆ, ವರ್ತೂರು ಸುತ್ತಮುತ್ತಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಸಂಚಾರ ದಟ್ಟಣೆಯಿಂದ ತೀವ್ರವಾಗಿ ಬೇಸರಗೊಂಡಿರುವ ವರ್ತೂರು ದಿಶಾ ಅಪಾರ್ಟ್‌ಮೆಂಟ್‌ ನಿವಾಸಿಗಳು, ಬಳಗೆರೆ-ವರ್ತೂರು ರಸ್ತೆಯಲ್ಲಿ ವಾಹನ ಸಂಚಾರ ತಡೆದು ನಿನ್ನೆ ಮೇಣದಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಿದರು.

ಮಹದೇವಪುರ ವಲಯದ ಎಎಪಿ ಮುಖಂಡ ಅಶೋಕ್ ಮೃತ್ಯುಂಜಯ ಮಾತನಾಡಿ, ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕಿಡಿಕಾರಿದರು.

‘ಕಳೆದ ಎಂಟು ವರ್ಷಗಳಿಂದ ಸಂಚಾರ ದುಸ್ತರವಾಗಿದ್ದು, 14 ವರ್ಷಗಳಿಂದ ಲಿಂಬಾವಳಿ ಅಧಿಕಾರದಲ್ಲಿದ್ದಾರೆ. ಆದರೆ, ಸಮಸ್ಯೆ ಪರಿಹರಿಸುವಲ್ಲಿ ಏನನ್ನೂ ಮಾಡಿಲ್ಲ. ರಸ್ತೆಗಳನ್ನು ವಿಸ್ತರಿಸದೆ ಅಪಾರ್ಟ್'ಮೆಂಟ್ ನಿರ್ಮಾಣಕ್ಕೆ ಅನುಮತಿ ನೀಡಲಾಗತ್ತಿದೆ. ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.

ಸ್ಥಳದಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಸಂಚಾರ ದಟ್ಟಣೆ ಎದುರಾಗುತ್ತದೆ. ಶಾಲೆಗೆ ಹೋಗುವ ಮಕ್ಕಳಿಗೆ ಭಾರೀ ಸಮಸ್ಯೆಗಳಾಗುತ್ತಿದೆ. ಇಂದು ಆರ್ಕಿಡ್ ಶಾಲೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವರ್ತೂರು ರೈಸಿಂಗ್‌ನ ಸದಸ್ಯ ಜಗದೀಶ್‌ ರೆಡ್ಡಿ ಮಾತನಾಡಿ, ‘ಬಿಬಿಎಂಪಿಯವರು ಮೊದಲು ಟಿ-ಜಂಕ್ಷನ್‌ಗಳ ಅಗಲೀಕರಣ, ಒಳಚರಂಡಿ ಪೈಪ್‌ಗಳ ಅಳವಡಿಕೆ, ರಸ್ತೆಗಳ ಅಗಲೀಕರಣದಂತಹ ಮೂಲಭೂತ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಬೇಕು. ಇದನ್ನು ಹೊರತುಪಡಿಸಿ ಹೊಸ ಯೋಜನೆಗಳ ಕೈಗೆತ್ತಿಕೊಂಡರೆ ಇದು ಸಂಚಾರ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತದೆ. ಪ್ರಮುಖ ಜಂಕ್ಷನ್‌ಗಳಲ್ಲಿ ಸಮಸ್ಯೆಯನ್ನು ನಿರ್ವಹಿಸಲು ಟ್ರಾಫಿಕ್ ಪೊಲೀಸರಿಲ್ಲದಿರುವುದು ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಬಳಗೆರೆ-ವರ್ತೂರು ರಸ್ತೆ 15 ಅಡಿ ಅಗಲವೂ ಇಲ್ಲ, ಸುಸ್ಥಿರ ಮೂಲಸೌಕರ್ಯ ಕಲ್ಪಿಸದೆ ದೊಡ್ಡ ದೊಡ್ಡ ಬಿಲ್ಡರ್‌ಗಳಿಗೆ ಪಾಲಿಕೆ ಅನುಮತಿ ನೀಡಿದೆ ಎಂದು ರೆಡ್ಡಿ ಹೇಳಿದ್ದಾರೆ.

ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಪೇದೆಯೊಬ್ಬರು ಮಾತನಾಡಿ, ‘ಪಾಣತ್ತೂರು, ಬಳಗೆರೆ, ವರ್ತೂರು ರಸ್ತೆಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ. ಬುಧವಾರ ಎದುರಾಗಿದ್ದ ಸಂಚಾರ ದಟ್ಟಣೆ ಸುತ್ತಮುತ್ತಲಿನ ಕೆಲ ಮದುವೆ ಕಾರ್ಯಕ್ರಮಗಳಿಂದಾಗಿ ಎದುರಾಗಿತ್ತು ಎಂದಿದ್ದಾರೆ.

SCROLL FOR NEXT