ರಾಜ್ಯ

58 ವಯಸ್ಸಿಗೆ ನಿವೃತ್ತಿ ನೀಡಿದ ಕೆಎಸ್‌ಸಿಎಗೆ ಹೈಕೋರ್ಟ್ ನೋಟಿಸ್

Manjula VN

ಬೆಂಗಳೂರು: ರಾಜ್ಯ ಸರ್ಕಾರವು ನಿವೃತ್ತಿ ವಯಸ್ಸನ್ನು 60ಕ್ಕೆ ಹೆಚ್ಚಿಸಿದ್ದರೂ 58ನೇ ವಯಸ್ಸಿಗೆ ನೌಕರರೊಬ್ಬರನ್ನು ನಿವೃತ್ತಿಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಕೆಎಸ್‌ಸಿಎ ನಿವೃತ್ತ ನೌಕರ ಜೆ.ರಾಜಕುಮಾರ್ ಎಂಬುವವರು ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನೋಟಿಸ್ ಮಾಡಿದೆ.

ಅರ್ಜಿದಾರರು ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಕರ್ನಾಟಕ ಕೈಗಾರಿಕಾ ಸ್ಥಾಪನೆ ನಿಯಮಗಳು-1961ರ ವೇಳಾಪಟ್ಟಿ-1 ಅನ್ನು ತಿದ್ದುಪಡಿ ಮಾಡಿ ರಾಜ್ಯ ಸರ್ಕಾರವು 2017ರ ಮಾರ್ಚ್ 27ರಂದು ಅಧಿಸೂಚನೆ ಹೊರಡಿಸಿದೆ. ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿವೃತ್ತಿಯ ವಯಸ್ಸು 60 ವರ್ಷಗಳಾಗಿರಬೇಕು ಎಂದು ಈ ಹಿಂದಿನ ಹಲವು ಪ್ರಕರಣಗಳಲ್ಲಿ ಹೈಕೋರ್ಟ್ ಕೂಡ ತೀರ್ಪು ನೀಡಿದೆ’ ಎಂಬ ಅಂಶಗಳನ್ನು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಹಿನ್ನಲೆಯಲ್ಲಿ 2022ರ ಮಾರ್ಚ್ 13ರಂದು ತನ್ನನ್ನು ಸೇವೆಯಿಂದ ನಿವೃತ್ತಿಗೊಳಿಸಿ ಕೆಎಸ್‌ಸಿಎ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾರೆ.

SCROLL FOR NEXT