ಬೆಂಗಳೂರು: ಭಾರೀ ಮಳೆಯಿಂದಾಗಿ ನಗರದ ರಸ್ತೆಗಳು ಹದಗೆಟ್ಟಿದ್ದು, ರಸ್ತೆಗಳ ಡಾಂಬರೀಕರಣ ಹಾಗೂ ದುರಸ್ಥಿಗೆ ರೂ.3000 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೈಕೋರ್ಟ್'ಗೆ ಬಿಬಿಎಂಪಿ ಮಾಹಿತಿ ನೀಡಿದೆ.
ಈ ಕುರಿತು ಹೈಕೋರ್ಟ್'ನಲ್ಲಿ ಆಫಿಡವಿಟ್ ಸಲ್ಲಿಸಿರುವ ಬಿಬಿಎಂಪಿ, ಆನಂದ್ ರಾವ್ ವೃತ್ತ, ಹೆಣ್ಣೂರು, ಹೆಬ್ಬಾಳ, ಕೆಎಸ್‌ಆರ್ ರೈಲು ನಿಲ್ದಾಣ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ರೂ.3000 ಕೋಟಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಮುಂದಿನ ನಾಲ್ಕೈದು ತಿಂಗಳಲ್ಲಿ ನಗರದಾದ್ಯಂತ 450 ಕಿಲೋಮೀಟರ್ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಮತ್ತು 2,500 ಕಿಮೀ ವಾರ್ಡ್ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗುವುದು. ಐದು ದಿನಗಳ ಹಿಂದೆ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿಎಸ್ ಪ್ರಹ್ಲಾದ್ ತಿಳಿಸಿದ್ದಾರೆ.
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಎಚ್‌ಎಂ ವೆಂಕಟೇಶ್ ಅವರು ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಗರಕ್ಕೆ ಬರಲಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಭಿವೃದ್ಧಿ ಕಾರ್ಯಗಳು ವೇಗಗೊಂಡಿದೆ. ಬಿಬಿಎಂಪಿ ಬಹುತೇಕ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿಲ್ಲ, ಕಳೆದ ಕೆಲವು ದಿನಗಳಿಂದಷ್ಟೇ ಕೆಲಸದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಮೆಚ್ಚಿಸಲು ಹಾಗೂ ಚುನಾವಣೆ ಕಾರಣದಿಂದ ಕಾಮಗಾರಿಗಳ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿಂದೆ ಮೋದಿಯವರ ಭೇಟಿ ಸಂದರ್ಭದಲ್ಲೂ ಹೀಗೇ ಆಗಿತ್ತು ಎಂದು ತಿಳಿಸಿದ್ದಾರೆ.