ರಾಜ್ಯ

ಗಾಂಧಿ ಕುಟುಂಬವೆಂದರೆ ನನಗೆ ಪ್ರೀತಿ, ಅವರಿಗಾಗಿ ಪ್ರತಿನಿತ್ಯ ಪ್ರಾರ್ಥನೆ ಮಾಡುತ್ತಿದ್ದೆ: ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ ಶ್ರೀಹರನ್

Manjula VN

ಬೆಂಗಳೂರು: ಮಾರ್ಚ್ 19, 2008 ರಂದು ವೆಲ್ಲೂರಿನ ಮಹಿಳಾ ವಿಶೇಷ ಕಾರಾಗೃಹದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನನ್ನನ್ನು ಭೇಟಿಯಾದಾಗ ನನಗೆ ಅವರ ಮೇಲೆ ಪ್ರೀತ, ಗೌರವ ಶುರುವಾಗಿತ್ತು. “ನಾನು ಗಾಂಧಿ ಕುಟುಂಬವನ್ನು ಪ್ರೀತಿಸುತ್ತೇನೆ. ಅವರ ಕುಟುಂಬದ ಪ್ರತಿಯೊಬ್ಬರಿಗಾಗಿ ಪ್ರತಿದಿನ ಪ್ರಾರ್ಥಿಸುತ್ತಿದ್ದೆ. ಅವರಿಗೆ ನಾನು ಶುಭ ಹಾರೈಸುತ್ತೇನೆಂದು ಜೈಲಿನಿಂದ ಬಿಡುಗಡೆಯಾದ ಬಳಿಕ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ನಳಿನಿ ಶ್ರೀಹರನ್ ಅವರು ಭಾವುಕರಾಗಿ ಹೇಳಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಟ್ಟು 6 ಮಂದಿ ಭಾರತೀಯ ಮತ್ತು ಶ್ರೀಲಂಕಾ ಪ್ರಜೆಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲು ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದ ಎಲ್ಲಾ ಪ್ರತಿಗಳನ್ನು ಸ್ವೀಕರಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿರುವ ನಳಿನಿ ಅವರು, ಭೂತಕಾಲ ಭೂತಕಾಲವಷ್ಟೇ. ನನಗೆ ಈಗಾಗಲೇ ಸಾಕಷ್ಟು ಪಶ್ಚಾತ್ತಾಪವಾಗಿದೆ. ಮಾಡಿದ ತಪ್ಪಿಗೆ ದೊಡ್ಡ ಬೆಲೆಯನ್ನೇ ಕಟ್ಟಿದ್ದೇನೆ. ಜೈಲಿನಲ್ಲಿದ್ದ ದಿನಗಳು ನನ್ನ ಜೀವನದ ಉತ್ತಮ ದಿನಗಳಾಗಿವೆ. ನನ್ನ ಪತಿ ಮತ್ತು ಮಗಳೊಂದಿಗೆ ಹೊಸ ಬದುಕು ಆರಂಭಿಸುತ್ತೇನೆ.  ಸಾರ್ವಜನಿಕ ಬದುಕನ್ನು ಪ್ರವೇಶಿಸುವುದಿಲ್ಲ. 30 ವರ್ಷಗಳಿಂದ ನಮ್ಮನ್ನು ಬೆಂಬಲಿಸಿದ ತಮಿಳರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ನಳಿನಿ ಹೇಳಿದ್ದಾರೆ.

ಕುಟುಂಬದ ಜೊತೆಗೆ ಇರಲು ಬಯಸಿದ್ದೇನೆ. ನನ್ನ ಮಗಳು ಬೆಳೆದಿದ್ದನ್ನು ನಾನು ನೋಡಲೇ ಇಲ್ಲ. ಬ್ರಿಟನ್ ನಲ್ಲಿ ಶಿಕ್ಷಕಿಯಾಗಿರುವ ನನ್ನ ಅತ್ತಿಗೆ ನನ್ನ ಮಗಳನ್ನು ಬೆಳೆಸಿದ್ದಾರೆ. ನನ್ನ ಅತ್ತೆ ಕೂಡ ಬ್ರಿಟನ್ ನಲ್ಲಿಯೇ ಇದ್ದಾರೆಂದು ತಿಳಿಸಿದ್ದಾರೆ.

ಇದೇ ವೇಳೆ ತಮ್ಮ ಪತಿ ಭಾರತೀಯ ಪೌರತ್ವವನ್ನು ಬಯಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಭಾರತೀಯಳನ್ನು ಮದುವೆಯಾಗಿರುವುದರಿಂದ ಮತ್ತು ಸುಮಾರು 32 ವರ್ಷಗಳಿಂದ ದೇಶದಲ್ಲಿ ಉಳಿದುಕೊಂಡಿರುವುದರಿಂದ ಇದು ಸಮಸ್ಯೆಯಾಗುವುದಿಲ್ಲ ಎಂದು ಭಾವಿಸಿದ್ದೇನೆ. ನನ್ನ ಪತಿ ಕುಟುಂಬದ ಜೊತೆಗೆ ಕಾಲ ಕಳೆಯಲು ಬಯಸಿದ್ದಾರೆ ಎಂದಿದ್ದಾರೆ.

ಜೀವನದ 31 ವರ್ಷಗಳನ್ನು ಸುಧೀರ್ಘವಾಗಿ ಜೈಲಿನಲ್ಲಿ ಕಳೆದಿದ್ದೇವೆ. ಆ ಕರಾಳ ದಿನಗಳನ್ನು ಹಿಂತಿರುಗಿ ನೋಡುವುದರಲ್ಲಿ ಅರ್ಥವಿಲ್ಲ. ಇದೀಗ ಜೀವನದ ಮುಂದಿನ ದಿನ ನೋಡಲು ಬಯಸುತ್ತಿದ್ದೇವೆ. ಸಾರ್ವಜನಿಕ ಜೀವನ ಪ್ರವೇಶಿಸುವುದಿಲ್ಲ. ನಮಗೆ ಬೆಂಬಲ ನೀಡಿದ ಸರ್ಕಾರ ಹಾಗೂ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದ್ದಾರೆ.

SCROLL FOR NEXT