ರಾಜ್ಯ

ಹುಬ್ಬಳ್ಳಿಯಲ್ಲಿ ಧಾರ್ಮಿಕ ಮತಾಂತರ: ಕಠಿಣ ಕ್ರಮಕ್ಕೆ ಆಗ್ರಹಿಸಿ ಠಾಣೆ ಮುಂದೆ ಪ್ರತಿಭಟನೆ, ಪರಿಸ್ಥಿತಿ ಉದ್ವಿಗ್ನ

Lingaraj Badiger

ಹುಬ್ಬಳ್ಳಿ: ಧಾರ್ಮಿಕ ಮತಾಂತರದ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಒಂದು ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಮತ್ತು ವ್ಯಕ್ತಿಯೊಬ್ಬರು ಕೆಲವು ಪಾದ್ರಿಗಳು ಸೇರಿದಂತೆ 15 ಜನರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿದ ಶಿಕ್ಕಲಗಾರ ಸಮುದಾಯದವರು ಹಾಗೂ ಹಿಂದೂಪರ ಸಂಘಟನೆಗಳ ಸದಸ್ಯರು ಮಂಗಳವಾರ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಮತಾಂತರದಲ್ಲಿ ತೊಡಗಿರುವ ಕ್ರೈಸ್ತ ಮಿಷನರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಹಳೇ ಹುಬ್ಬಳ್ಳಿಯಲ್ಲಿ ಶಿಕ್ಕಲಗಾರ ಸಮುದಾಯವನ್ನು ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಶಿಕ್ಕಲಗಾರ ಸಮುದಾಯದ ಕುಟುಂಬವೊಂದರಲ್ಲಿ ಮತಾಂತರ ವಿಚಾರವಾಗಿ ದಂಪತಿಯ ನಡುವೆ ಬಿರುಕು ಮೂಡಿತ್ತು. ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಪತಿಗೆ ಒತ್ತಡ ಹಾಕಿದ್ದು, ಮತಾಂತರ ಆಗದಿದ್ದರೆ ಸಂಸಾರ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಪತ್ನಿಯ ಒತ್ತಡ ತಾಳಲಾರದೆ ಪತಿ ಸಮಾಜದ ಮುಖಂಡರ ಗಮನಕ್ಕೆ ತಂದಿದ್ದರು.

ಇದರಿಂದ ಆಕ್ರೋಶಗೊಂಡ ಶಿಕ್ಕಲಿಗರ ಸಮುದಾಯದವರು ಮತಾಂತರಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

SCROLL FOR NEXT