ರಾಜ್ಯ

ಸಿಬಿಐ ‘ಬಿ’ ರಿಪೋರ್ಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪರೇಶ್ ಮೆಸ್ತಾ ಕುಟುಂಬಸ್ಥರು

Nagaraja AB

ಕಾರವಾರ: 2017ರಲ್ಲಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ನಡೆದಿದ್ದ  ಹಿಂದೂ ಕಾರ್ಯಕರ್ತ ಪರೇಶ್ ಪೆಸ್ತಾ ಸಾವು ಪ್ರಕರಣ ಕುರಿತು ಸಿಬಿಐ ಸಲ್ಲಿಸಿದ್ದ ವರದಿಯಲ್ಲಿ ಸಹಜ ಸಾವು ಎಂದು ಉಲ್ಲೇಖಿಸಿರುವುದನ್ನು ವಿರೋಧಿಸಿ  ಆತನ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದಾರೆ. 

ಸಿಬಿಐ ಬಿ ರಿಪೋರ್ಟ್ ನಿಂದ ಅತೃಪ್ತಗೊಂಡಿರುವ ಕುಟುಂಬಸ್ಥರು, ಈ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವಂತೆ ಒತ್ತಾಯಿಸಿ ಹೊನ್ನಾವರ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ನಲ್ಲಿ ಹಾಜರಾದ ಪರೇಶ್ ಮೆಸ್ತಾ ಪರ ವಕೀಲರು, ಸಿಬಿಐ ವರದಿಗೆ ಒಪ್ಪಿಗೆಯಿಲ್ಲ ಎಂದು ಹೇಳಿದ್ದಾರೆ. 

ಪ್ರಕರಣವನ್ನು ಮುಕ್ತಾಯಗೊಳಿಸಲು ಸಿಬಿಐ ‘ಬಿ’ ವರದಿ ಸಲ್ಲಿಸಿದ ನಂತರ, ಅಭಿಪ್ರಾಯವನ್ನು ಸಲ್ಲಿಸುವಂತೆ ನ್ಯಾಯಾಲಯ ಕುಟುಂಬಕ್ಕೆ ನೋಟಿಸ್ ನೀಡಿತ್ತು. ಅದರಂತೆ ಪರೇಶ್ ತಂದೆ ಕಮಲಾಕರ್ ಮೇಸ್ತಾ ನ್ಯಾಯಾಲಯದ ಮುಂದೆ ಹಾಜರಾಗಿ ವರದಿ ಒಪ್ಪುವುದಿಲ್ಲ ಎಂದು ತಿಳಿಸಿದರು.

ಪರೇಶ್ ಹತ್ಯೆಯಾಗಿ ಐದು ವರ್ಷಗಳೇ ಕಳೆದಿವೆ. ಡಿಸೆಂಬರ್ 7, 2017 ರಂದು ನಾಪತ್ತೆಯಾಗಿದ್ದ ಅವರ ಶವ ಡಿಸೆಂಬರ್ 8, 2017 ರಂದು ಕೆರೆಯೊಂದರಲ್ಲಿ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಸ್ತಾ ಅವರ ಸಾವು 2018 ರಲ್ಲಿ ಸಂಚಲನವನ್ನು ಸೃಷ್ಟಿಸಿತು, ಇದನ್ನು ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.

ಕೊನೆಗೂ ಒತ್ತಡಕ್ಕೆ ಮಣಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐ ತನಿಖೆಗೆ ಒಪ್ಪಿಗೆ ಸೂಚಿಸಿದರು. ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ 2021 ಅಕ್ಟೋಬರ್ ನಲ್ಲಿ ಸಿಬಿಐ ವರದಿ ಸಲ್ಲಿಸುವ ಮೂಲಕ ಪ್ರಕರಣವನ್ನು ಅಂತ್ಯಗೊಳಿಸಿತ್ತು. 
 

SCROLL FOR NEXT