ರಾಜ್ಯ

ವೋಟರ್ ಐಡಿ ಅಕ್ರಮ: ಬಡಪಾಯಿಗಳ ಮೇಲೆ ಮೊಕದ್ದಮೆ, ನೈಜ ಅಪರಾಧಿಗಳ ರಕ್ಷಣೆ- ಸಿದ್ದರಾಮಯ್ಯ 

Nagaraja AB

ಬೆಂಗಳೂರು: ವೋಟರ್ ಐಡಿ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರವಾಗಿ ಷಾಮೀಲಾಗಿದ್ದಾರೆ. ಈ ಹಗರಣದಲ್ಲಿ ಬಡಪಾಯಿಗಳ ಮೇಲೆ ಮೊಕದ್ದಮೆ ದಾಖಲಿಸಿ, ನೈಜ ಅಪರಾಧಿಗಳನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಮತದಾರರ ಪಟ್ಟಿ ಪರಿಷ್ಕರಣೆಯ ಅಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿ, ನ್ಯಾಯಾಂಗ ತನಿಖೆಗೆ ಒಪ್ಪಿಸಬಹುದು ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ. ಆಯೋಗ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕೇಂದ್ರ ಚುನಾವಣಾ ಆಯೋಗದ ಬಳಿ ನ್ಯಾಯಕ್ಕಾಗಿ ಮೊರೆ ಹೋಗುತ್ತೇವೆ ಎಂದು ಅವರು ಹೇಳಿದ್ದಾರೆ. 

ಮುಖ್ಯಮಂತ್ರಿ ಬೊಮ್ಮಾಯಿ ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದವರ  ಬಂಧನ ಯಾಕಾಗಿದೆ? ಮತದಾರರ ಪಟ್ಟಿ ಪರಿಷ್ಕರಣೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ರದ್ದು ಮಾಡಿದ್ದು ಯಾಕೆ? ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಚಿಲುಮೆ ಸಂಸ್ಥೆಯ ಮುಖ್ಯಸ್ಥರಾದ ರವಿಕುಮಾರ್ ಕೃಷ್ಣಪ್ಪನವರ ಬಂಧನವಾಗಿಲ್ಲ, ಚಿಲುಮೆ ಸಂಸ್ಥೆಯ ಕಚೇರಿ ಸಿಬ್ಬಂದಿಗಳನ್ನು ಬಂಧಿಸಿಲ್ಲ. ಬಿಬಿಎಂಪಿ ಕಮಿಷನರ್ ಅವರ ಬಂಧನವಾಗಿಲ್ಲ. ಇದಕ್ಕೆ ಕಾರಣ ಏನು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿಯನ್ನು ಕೇಳಿದ್ದಾರೆ. 

ಮತದಾರರ ಮಾಹಿತಿಯ ಕಳ್ಳತನ ಮತ್ತು ಒಂದು ನಿರ್ದಿಷ್ಟ ಸಮುದಾಯದ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕುವ ದುರುದ್ದೇಶದಿಂದಲೇ ರಾಜ್ಯ   ಸರ್ಕಾರ ಮತದಾರರ ಪಟ್ಟಿ ಪರಿಷ್ಕರಣೆಯ ಕೆಲಸವನ್ನು ವಂಚಕ ಕಂಪೆನಿಗೆ ಕೊಟ್ಟಿದೆ. ಈ ಹಗರಣದಲ್ಲಿ ಇನ್ನಷ್ಟು ಸಾಕ್ಷಿಗಳನ್ನು ನಾವು ಸಂಗ್ರಹ ಮಾಡುತ್ತಿದ್ದೇವೆ. ಇಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ಬಿಜೆಪಿ ನಾಯಕರು ಚುನಾವಣೆಯಲ್ಲಿ ಸೋಲುವ ಭಯದಿಂದ ಈ ರೀತಿ ವಾಮ ಮಾರ್ಗ ಹಿಡಿದ್ದಿದ್ದಾರೆ, ಆದರೂ ಇಂಥಾ ಷಡ್ಯಂತ್ರಗಳನ್ನು ಎದುರಿಸಿ ನಾವು ಚುನಾವಣೆಯಲ್ಲಿ ಗೆಲ್ಲುತ್ತಿದ್ದೇವೆ. ಮುಂದೆಯೂ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
 

SCROLL FOR NEXT