ರಾಜ್ಯ

ಮಂಗಳೂರು ಆಟೋ ಸ್ಫೋಟ: ಸ್ಥಳೀಯ ಸಂಪರ್ಕದ ಸಾಧ್ಯತೆ, ತಮಿಳುನಾಡು, ಕೇರಳದಲ್ಲೂ ತನಿಖೆ!

Nagaraja AB

ಮಂಗಳೂರು/ಕೊಯಮತ್ತೂರು/ ತಿರುವನಂತಪುರ: ಮಂಗಳೂರಿನಲ್ಲಿ ನವೆಂಬರ್ 19 ರಂದು ಸಂಭವಿಸಿದ ಸ್ಫೋಟದ ಹಿಂದಿನ ಪ್ರಮುಖ ಶಂಕಿತ ಜಾಗತಿಕ ಭಯೋತ್ಪಾದನಾ ಸಂಘಟನೆಯಿಂದ ಪ್ರೇರಿತನಾಗಿದ್ದು,  ತನಿಖೆಯು ದಕ್ಷಿಣದ ಇನ್ನೂ ಎರಡು ರಾಜ್ಯಗಳಿಗೂ ವಿಸ್ತರಿಸುತ್ತಿದೆ. ಆತ ತಮಿಳುನಾಡು ಮತ್ತು ಕೇರಳಕ್ಕೂ ಭೇಟಿ ನೀಡಿದ್ದಾನೆ ಎನ್ನಲಾಗಿದ್ದು, ಪೋಲೀಸ್ ತಂಡಗಳು ಸ್ಥಳೀಯ ಸಹಚರರು ಮತ್ತು ತೀರ್ಥಳ್ಳಿ ಮೂಲದವರ ಸಂಪರ್ಕವನ್ನು ಪರಿಶೀಲಿಸುತ್ತಿವೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರಿಕ್ ಅವರು ಡಿಟೋನೇಟರ್, ವೈರ್ ಮತ್ತು ಬ್ಯಾಟರಿಗಳನ್ನು ಅಳವಡಿಸಿದ ಪ್ರೆಶರ್ ಕುಕ್ಕರ್‌ನೊಂದಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಮಂಗಳೂರು ಹೊರವಲಯದಲ್ಲಿ ಶನಿವಾರ ಸ್ಫೋಟಗೊಂಡಿತು. ಇದು ಗಂಭೀರ ಹಾನಿಯನ್ನುಂಟು ಮಾಡುವ ಉದ್ದೇಶದ ಭಯೋತ್ಪಾದಕ ಕೃತ್ಯವಾಗಿದೆ ಎಂದು  ಪೊಲೀಸರು ಹೇಳಿದ್ದಾರೆ.

 ಶಾರಿಕ್ ಗೆ ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ ಮಾತನಾಡಲು ಸಾಧ್ಯವಾಗುತ್ತಿಲ್ಲ. ಈತನನ್ನು ನಿರ್ವಹಿಸುತ್ತಿದ್ದ  ಬೆಂಗಳೂರಿನ ಸುದ್ದಗುಂಟೆಪಾಳ್ಯದ  ಅಬ್ದುಲ್ ಮತೀನ್ ತಾಹಾ ಆಗಿದ್ದು, ಈತನ ಪತ್ತೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ ಎಂದು ಕರ್ನಾಟಕ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಸೋಮವಾರ ತಿಳಿಸಿದ್ದಾರೆ.

ಜಾಗತಿಕ ಭಯೋತ್ಪಾದಕ ಸಂಘಟನೆಯೊಂದರಿಂದ ಶಾರಿಕ್ ಪ್ರಭಾವಿತನಾಗಿದ್ದ. ಆತ ಬದುಕುಳಿಯುವಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ನಾವು ಅವನನ್ನು ಪ್ರಶ್ನಿಸುವ ಹಂತಕ್ಕೆ ಕೊಂಡೊಯ್ಯಬೇಕು ಎಂದು ಕುಮಾರ್ ಹೇಳಿದರು. ಮೈಸೂರಿನಲ್ಲಿ ಶಾರಿಕ್ ಬಾಡಿಗೆಯಲ್ಲಿದ್ದ ಮನೆಯಿಂದ ಮ್ಯಾಚ್ ಬಾಕ್ಸ್, ಸಲ್ಫರ್, ಫಾಸ್ಪರಸ್, ಬ್ಯಾಟರಿಗಳು, ಸರ್ಕ್ಯೂಟ್ ಗಳು, ನಟ್, ಬೋಲ್ಟ್ ಗಳು ಪತ್ತೆಯಾಗಿವೆ. ಈ ಕೃತ್ಯಗಳ ಬಗ್ಗೆ ಮನೆ ಮಾಲೀಕರಿಗೆ ಗೊತ್ತಿರಲಿಲ್ಲ. ಮತೀನ್ ತಾಹಾ ಈ ಪ್ರಕರಣದ ಮಾಸ್ಟರ್ ಮೈಂಡ್.  ತಮಿಳುನಾಡಿನ ಮೊಹಮ್ಮದ್ ಪಾಶಾ, ಖ್ವಾಜಾ ಮತ್ತು ಮತೀನ್ ತಾಹಾ ವಿರುದ್ಧ 2020 ರಲ್ಲಿ ಬೆಂಗಳೂರಿನ ಸದ್ದುಗುಂಟೆ ಪಾಳ್ಯದಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಅವರು ತಿಳಿಸಿದರು.

ನೆರೆಯ ತಮಿಳುನಾಡಿನಲ್ಲಿ, ಶಾರಿಕ್‌ಗೆ ಸಹಚರರು ಇದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಊಟಿ ಮೂಲದ ಸುರೇಂದ್ರನ್ ಅವರ ಆಧಾರ್ ಕಾರ್ಡ್ ಬಳಸಿ ಶಾರಿಕ್ ಮೊಬೈಲ್ ಫೋನ್ ಸಿಮ್ ಕಾರ್ಡ್ ಖರೀದಿಸಿರುವುದು ಈಗ ಸ್ಪಷ್ಟವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಸ್ಫೋಟಕ್ಕೆ ಸಾಕ್ಷಿಯಾದ ಕೊಯಮತ್ತೂರಿನಲ್ಲಿ ಶಾರಿಕ್ ಸೆಪ್ಟೆಂಬರ್‌ನಲ್ಲಿ ತಂಗಿದ್ದು ದೊಡ್ಡ ಕ್ರಿಮಿನಲ್ ಪಿತೂರಿಯ ಭಾಗವಾಗಿದೆಯೇ ಎಂದು ಪರಿಶೀಲಿಸಲು ತನಿಖೆ ನಡೆಯುತ್ತಿದೆ. ಈ ಮಧ್ಯೆ ಕೇರಳದಲ್ಲಿ, ಮಂಗಳೂರು ಸ್ಫೋಟದ ತನಿಖೆ ನಡೆಸುತ್ತಿರುವ ಕರ್ನಾಟಕ ಪೊಲೀಸ್ ಅಧಿಕಾರಿಗಳ ತಂಡ, ಶಾರಿಕ್‌ನ ಆಲುವಾ ಲಿಂಕ್‌ನ ವಿಚಾರಣೆಗಾಗಿ ಎರ್ನಾಕುಲಂ ತಲುಪಿದೆ.

SCROLL FOR NEXT