ರಾಜ್ಯ

ದತ್ತು ಮಕ್ಕಳೂ ಅನುಕಂಪದ ನೌಕರಿ ಪಡೆಯಲು ಅರ್ಹರು: ಹೈಕೋರ್ಟ್ ಮಹತ್ವದ ಆದೇಶ

Lingaraj Badiger

ಬೆಂಗಳೂರು: ದತ್ತು ಮಕ್ಕಳು ಸಹ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ಅರ್ಹರು ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ಮಹತ್ವದ ಆದೇಶ ನೀಡಿದೆ.

ದತ್ತು ಪುತ್ರ ಅನುಕಂಪದ ನೌಕರಿಗೆ ಅರ್ಹರಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಗಿರೀಶ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್, ನ್ಯಾ. ಜಿ, ಬಸವರಾಜ್ ಅವರಿದ್ದ ವಿಭಾಗೀಯ ಪೀಠ, ನೈಸರ್ಗಿಕ ಮಕ್ಕಳಿಗೂ ದತ್ತು ಮಕ್ಕಳಿಗೂ ಯಾವುದೇ ವ್ಯತ್ಯಾಸವಿಲ್ಲ. ವ್ಯತ್ಯಾಸ ಮಾಡಿದರೆ ದತ್ತು ತೆಗೆದುಕೊಳ್ಳುವ ಉದ್ದೇಶ ನಿರರ್ಥಕವಾಗಲಿದೆ ಎಂದು ಹೇಳಿದೆ. 

ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿ ಮೃತಪಟ್ಟಾಗ ಆತನ ಕುಟುಂಬ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಆಧಾರದಲ್ಲಿ ಅನುಕಂಪದ ನೇಮಕಾತಿ ಇರಲಿದ್ದು, ಇದಕ್ಕೆ ದತ್ತು ಮಕ್ಕಳು ಸಹ ಅರ್ಹರಾಗಿರುತ್ತಾರೆ ಎಂದು ವಿಭಾಗೀಯ ಪೀಠ ಹೇಳಿದೆ. ಅಲ್ಲದೆ ದತ್ತು ಪುತ್ರ ಗಿರೀಶ್ ಗೆ ಅನುಕಂಪದ ನೌಕರಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಗಿರೀಶ್ ಅವರು ವಿನಾಯಕ ಮುತ್ತತ್ತಿ ಎಂಬುವರ ದತ್ತುಪುತ್ರ ಆಗಿದ್ದಾರೆ. ಅಭಿಯೋಜನೆ ವಿಭಾಗದಲ್ಲಿ ವಿನಾಯಕ ಮುತ್ತತ್ತಿ ದಲಾಯತ್ ಆಗಿದ್ದರು. 2010ರಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಗಿರೀಶ್ ಅವರು ಅನುಕಂಪದ ನೌಕರಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ದತ್ತು ಪುತ್ರನಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ನಿಯಮಗಳಲ್ಲಿ ಅವಕಾಶ ಇಲ್ಲ ಎಂಬ ಕಾರಣ ನೀಡಿ ಅನುಕಂಪದ ನೌಕರಿ ನಿರಾಕರಿಸಲಾಗಿತ್ತು.

SCROLL FOR NEXT