ರಾಜ್ಯ

ರಾಜ್ಯಗಳ ಮಧ್ಯೆ ವ್ಯಾಜ್ಯ ಹುಟ್ಟಿಸುವ ಕೆಲಸ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಮುಖ್ಯಮಂತ್ರಿ ಮಾಡಬಾರದು: ಸಿಎಂ ಬೊಮ್ಮಾಯಿ

Sumana Upadhyaya

ಬೆಂಗಳೂರು: ರಾಜ್ಯ-ರಾಜ್ಯಗಳ ಮಧ್ಯೆ ವಾಜ್ಯ ಹುಟ್ಟಿಸುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಮುಖ್ಯಮಂತ್ರಿ ಏಕನಾಥ ಶಿಂಧೆ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲ ಭಾಷಿಕರನ್ನು ಒಂದೇ ಎಂದು ನೋಡುತ್ತಿರುವಾಗ, ರಾಜ್ಯ ರಾಜ್ಯಗಳ ಮಧ್ಯೆ ಸೌಹಾರ್ದತೆಯಿರುವಾಗ ಬೃಹತ್ ಸಂಖ್ಯೆಯಲ್ಲಿ ಕನ್ನಡಿಗರಿರುವ ಮಹಾರಾಷ್ಟ್ರದಲ್ಲಿನ ಕನ್ನಡಿಗರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರು.

ಮಹಾರಾಷ್ಟ್ರಕ್ಕೆ ನೀರು ಕೊಟ್ಟು ಸಹಾಯ ಮಾಡಬೇಕೆಂದು ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಜೆತ್ ತಾಲ್ಲೂಕು ಕರ್ನಾಟಕಕ್ಕೆ ಸೇರಬೇಕೆಂದು ಅವರು ಗ್ರಾಮ ಪಂಚಾಯತ್ ಗಳಲ್ಲಿ ಕೂಡ ನಿರ್ಣಯ ಹೊರಡಿಸಿದರು. ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.

ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗೆ ಗಡಿ ಪ್ರಾಧಿಕಾರದಿಂದ ಅವುಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಸರ್ಕಾರ ತೀರ್ಮಾನಿಸಿದೆ. ಕರ್ನಾಟಕ ಏಕೀಕರಣದಲ್ಲಿ ಹೋರಾಟ ಮಾಡಿರುವ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮತ್ತು ಸ್ವತಂತ್ರ ಹೋರಾಟದಲ್ಲಿ, ಗೋವಾ ವಿಮೋಚನೆಗೆ ಹೋರಾಟ ಮಾಡಿರುವ ಕನ್ನಡಿಗರು, ಅವರ ದಾಖಲೆಗಳನ್ನು ತರಿಸಿ ಅವರಿಗೆ ಪಿಂಚಣಿಯನ್ನು ನೀಡುವ ಯೋಜನೆಯನ್ನು ನಮ್ಮ ಸರ್ಕಾರ ಮಾಡಿದೆ ಎಂದರು.

ಗಡಿ ಪ್ರಾಧಿಕಾರದಿಂದ, ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

SCROLL FOR NEXT