ರಾಜ್ಯ

ಮಂಗಳೂರಿಗೆ ಸಿಎಂ ಬೊಮ್ಮಾಯಿ ಬಂದು ಹೋದ ಕೆಲವೇ ಗಂಟೆಗಳಲ್ಲಿ ಸ್ಫೋಟ: ಕಳವಳಕಾರಿ ಸಂಗತಿ ಎಂದ ಪೊಲೀಸರು

Sumana Upadhyaya

ಮಂಗಳೂರು: ತೀವ್ರ ಸಂಚಲನ ಮೂಡಿಸಿರುವ ಮಂಗಳೂರಿನ ಆಟೋ ರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿಗೆ ಭೇಟಿ ನೀಡುತ್ತಿದ್ದ ದಿನವೇ ಈ ಸ್ಫೋಟ ಸಂಭವಿಸಿರುವುದು ಕಳವಳಕಾರಿ ಸಂಗತಿಯಾಗಿದೆ.

ಕಳೆದ ಶನಿವಾರ ಸಂಜೆ 5.15ಕ್ಕೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸುವ ಕೆಲವೇ ಗಂಟೆಗಳ ಮೊದಲು ಸಿಎಂ ಬೊಮ್ಮಾಯಿ ಅವರು ಬೆಳಗ್ಗೆ 11 ಗಂಟೆಗೆ ಮಂಗಳೂರಿಗೆ ಆಗಮಿಸಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 3.30 ಕ್ಕೆ ತೆರಳಿದ್ದರು. ಸ್ಫೋಟ ಸಂಭವಿಸಿದ ಸ್ಥಳದಿಂದ ಇದು 10 ಕಿಲೋಮೀಟರ್ ದೂರದಲ್ಲಿದೆ.

ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿ, ಸಿಎಂ ಭೇಟಿ ನೀಡಿದ ಕೆಲವೇ ಗಂಟೆಗಳಲ್ಲಿ ಸ್ಫೋಟ ಸಂಭವಿಸಿರುವುದು ಆತಂಕಕಾರಿಯಾಗಿದೆ. “ಪ್ರಾಥಮಿಕ ತನಿಖೆಯ ಪ್ರಕಾರ, ಸ್ಫೋಟ ಪ್ರಕರಣವು ಆಕಸ್ಮಿಕವಲ್ಲ ಇದೊಂದು ಭಯೋತ್ಪಾದಕ ಕೃತ್ಯವಾಗಿದೆ. ಸಿಎಂ ಪ್ರವಾಸದ ವೇಳೆ ಸ್ಫೋಟ ಸಂಭವಿಸಿದ್ದು ನಮಗೆ ಆಘಾತ ತಂದಿದೆ ಎಂದಿದ್ದಾರೆ. 

ಆರೋಪಿ ಬಿಟ್ ಕಾಯಿನ್ ಬಳಕೆ
ಮೊಹಮ್ಮದ್ ಶಾರಿಕ್ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದ. ಈ ಕರೆನ್ಸಿಯನ್ನು ಹೇಗೆ ಪಡೆಯುತ್ತಿದ್ದ, ವ್ಯವಹಾರ ಯಾವ ರೀತಿ ಮಾಡುತ್ತಿದ್ದ ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ಅಲೋಕ್ ಕುಮಾರ್ ಹೇಳಿದ್ದಾರೆ. ಆತನ ಸಹವರ್ತಿ ಅರಾಫತ್ ಅಲಿ ದುಬೈಯಲ್ಲಿದ್ದು ಶಾರಿಕ್‌ಗೆ ಯಾರಾದರೂ ಹಣವನ್ನು ಕಳುಹಿಸುತ್ತಿದ್ದಾರೆಯೇ, ಹೊರಗಿನಿಂದ ಯಾರದ್ದಾದರೂ ಬೆಂಬಲವಿತ್ತೇ ಎಂದು ಪತ್ತೆಹಚ್ಚಲು ನೋಡುತ್ತಿದ್ದಾರೆ. ಶಾರಿಕ್ ಗೆ ಯಾರು ಆಶ್ರಯ ನೀಡುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದರು.

ಆರೋಪಿ ಮೂರು ಶರ್ಟ್ ಧರಿಸಿದ್ದನೇ?
ಬಾಂಬ್ ಟೈಮರ್-ಸರ್ಕ್ಯೂಟ್ ಅಳವಡಿಸಲಾಗಿರುವ ಪ್ರೆಶರ್ ಕುಕ್ಕರ್ ನ್ನು ಹೊತ್ತೊಯ್ಯುವಾಗ ಆರೋಪಿ ಶಾರಿಕ್ ಒಂದರ ಮೇಲೊಂದರಂತೆ ಮೂರು ಶರ್ಟ್ ಧರಿಸಿದ್ದನ್ನು ಎಂದು ಮೂಲಗಳು ಹೇಳುತ್ತವೆ. ಪೊಲೀಸರನ್ನು ಮೋಸ ಮಾಡಲು ವಾಹನ ಬದಲಾಯಿಸಿದಾಗಲೆಲ್ಲ ಬಟ್ಟೆ ಬದಲಿಸುತ್ತಿದ್ದನು. ಸಿಸಿಟಿವಿ ಕ್ಯಾಮೆರಾ ಮೂಲಕ ಆತನ ಚಲನವಲನಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಕಷ್ಟಕರವಾಗಿತ್ತು ಎಂದು ಮೂಲಗಳು ತಿಳಿಸಿವೆ.

SCROLL FOR NEXT