ರಾಜ್ಯ

'ಕರ್ನಾಟಕ- ಭಾರತ್ ಗೌರವ್ ಕಾಶಿ ದರ್ಶನ' 2 ನೇ ಟ್ರಿಪ್‌ನ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ, ಜನವರಿಯಲ್ಲಿ 3ನೇ ಟ್ರಿಪ್

Nagaraja AB

ಬೆಂಗಳೂರು: ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಪ್ರವಾಸಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ಬುಧವಾರ ಎರಡನೇ ಟ್ರಿಪ್‌ನ ಯಾತ್ರಾರ್ಥಿಗಳಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಗಿದೆ. ಉತ್ತರ ಭಾರತದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಡಿಸೆಂಬರ್‌ ತಿಂಗಳ ಬದಲಾಗಿ ಜನವರಿ ತಿಂಗಳಿನಲ್ಲಿ ಮುಂದಿನ ಟ್ರಿಪ್‌ಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಪ್‌ ಸಚಿವರಾದ  ಶಶಿಕಲಾ  ಜೊಲ್ಲೆ ಹೇಳಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಎರಡನೇ ಟ್ರಿಪ್‌ನ ಯಾತ್ರಾರ್ಥಿಗಳಿಗೆ  ಬಿಳ್ಕೊಡುಗೆ ನೀಡಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ಡಿಸೆಂಬರ್‌ ಮತ್ತು ಜನವರಿ ತಿಂಗಳ ಆರಂಭದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿರುತ್ತದೆ. ಈ ಹಿನ್ನಲೆಯಲ್ಲಿ ಕಾಶಿ ದರ್ಶನ ರೈಲನ್ನ ಡಿಸೆಂಬರ್‌ ಬದಲಾಗಿ ಜನವರಿ ತಿಂಗಳಲ್ಲಿ ಯೋಜಿಸುವಂತೆ ಐಆರ್‌ಸಿಟಿಸಿ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದಿದ್ದಾರೆ. ನಮ್ಮ ಯಾತ್ರಾರ್ಥಿಗಳಲ್ಲಿ ಹೆಚ್ಚಿನ ಜನರು ಹಿರಿಯ ನಾಗರೀಕರಿದ್ದು, ಅವರ ಆರೋಗ್ಯದ ದೃಷ್ಟಿಯಿಂದ ಜನವರಿ ತಿಂಗಳ 20 ರ ನಂತರ 3 ನೇ ಟ್ರಿಪ್‌ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಸಚಿವರು ತಿಳಿಸಿದರು. 

ಶೇಕಡಾ 90 ರಷ್ಟು ಹಿರಿಯ ನಾಗರೀಕರು: ಕಾಶಿ ದರ್ಶನ ರೈಲು ಯಾತ್ರೆಯ ಎರಡೂ ಟ್ರಿಪ್‌ಗಳಲ್ಲಿ ಶೇಕಡಾ 90 ರಷ್ಟು ಹಿರಿಯ ನಾಗರೀಕರು ಪಾಲ್ಗೊಂಡಿದ್ದಾರೆ. ಹಲವಾರು ಕುಟುಂಬಗಳು ತಮ್ಮ ಪೋಷಕರನ್ನ ಈ ಕಾಶಿಯಾತ್ರೆಗೆ ಕಳುಹಿಸುತ್ತಿದ್ದಾರೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಈ ಯಾತ್ರೆಯ ಅನುಕೂಲವನ್ನು ಹಿರಿಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುತ್ತಿರುವುದು ಸಂತಸದ ವಿಷಯ ಎಂದು ಸಚಿವರು ತಿಳಿಸಿದರು. 

ಕಾಶಿ ಯಾತ್ರೆಗೆ ಪ್ರತ್ಯೇಕ ಅನುದಾನ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಶಿ ದರ್ಶನ ಸಹಾಯಧನ ಹಾಗೂ ರೈಲು ಯಾತ್ರೆಗೆ ಪ್ರತ್ಯೇಕ ಅನುದಾನವಿದೆ. ಯಾವುದೇ ಇನ್ನಿತರ ಯೋಜನೆಗಳ ಅನುದಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿಲ್ಲ. ಕಾಶಿ ಯಾತ್ರೆಗೆ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ರೈಲು ಯಾತ್ರೆ ಯಾವುದೇ ತೊಂದರೆ ಇಲ್ಲದೆ ಮುಂದುವರೆಯಲಿದೆ ಎಂದು ಸಚಿವರ ತಿಳಿಸಿದರು.  

ಚಾರ್‌ಧಾಮ್‌ ಮತ್ತು ಮಾನಸ ಸರೋವರ ಯಾತ್ರಾರ್ಥಿಗಳ ಸಹಾಯಧನಕ್ಕೆ ಅರ್ಜಿ: ಚಾರ್‌ಧಾಮ್‌ ಯಾತ್ರೆ ಇತ್ತೀಚಿಗೆ ಮುಗಿದಿದ್ದು, ನಮ್ಮ ಇಲಾಖೆಯ ಕಾಲಾವಧಿಯಂತೆಯೇ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಯಾವಾಗಲೂ ನವೆಂಬರ್‌ ತಿಂಗಳಲ್ಲಿ ಪ್ರಾರಂಭವಾಗಿ, ಏಪ್ರಿಲ್‌ ತಿಂಗಳವರೆಗೆ ನಡೆಯುತ್ತದೆ. ಈ ಯೋಜನೆಗೂ ಸರಕಾರದ ಸಹಾಯಧನವಿದ್ದು ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಚಾರ್‌ಧಾಮ್‌ ಯಾತ್ರೆ ಇತ್ತೀಚಿಗೆ ಮುಗಿದಿರುವ ಹಿನ್ನಲೆಯಲ್ಲಿ ಅರ್ಜಿಗಳನ್ನು ಅಹ್ವಾನಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. 

SCROLL FOR NEXT