ರಾಜ್ಯ

ಚಿಲುಮೆ ಹಗರಣ: ಬಿಬಿಎಂಪಿ ಅಧಿಕಾರಿಗಳ ಅಮಾನತು, 3 ಕ್ಷೇತ್ರಗಳಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆಗೆ ಇಸಿಐ ಸೂಚನೆ

Nagaraja AB

ಬೆಂಗಳೂರು: ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಕ್ರಮ ಕೈಗೊಂಡಿದೆ.

ಈ ಸಂಬಂಧ ಮಹದೇವಪುರ, ಚಿಕ್ಕಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಈ ಕ್ಷೇತ್ರಗಳಲ್ಲಿ ಮತ್ತೊಮ್ಮೆ 100 ಪರ್ಸೆಂಟ್ ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದೆ.

ಶಿವಾಜಿನಗರ, ಚಿಕ್ಕಪೇಟೆ ಕ್ಷೇತ್ರದ ಉಸ್ತುವಾರಿ ಆಗಿದ್ದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಎಸ್. ರಂಗಪ್ಪ ಮತ್ತು ಮಹದೇವಪುರ ಕ್ಷೇತ್ರದ ಉಸ್ತುವಾರಿ ಅಧಿಕಾರಿಯಾಗಿದ್ದ ಕೆ. ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿದ್ದು, ಇಲಾಖೆ ವಿಚಾರಣೆಗೆ ಸೂಚಿಸಿದೆ.

 ವೋಟರ್ ಐಡಿಯಲ್ಲಿ ಅಕ್ರಮ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬೆನ್ನಲ್ಲೇ, ಚುನಾವಣಾ ಆಯೋಗ ಈ ನಿರ್ದೇಶನ ನೀಡಿದೆ. ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ 24 ಲಕ್ಷ ಮತದಾರರ ಹೆಸರನ್ನು ಕೈ ಬಿಡಲಾಗಿದ್ದು, ಹೊಸದಾಗಿ 11 ಲಕ್ಷ ಮತದಾರರ ಹೆಸರನ್ನು ಸೇರ್ಪಡೆ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳ ಪ್ರಭಾವದಿಂದ ಖಾಸಗಿ ಕಂಪನಿ ನೌಕರರು ಮತದಾರರ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. 

ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕವನ್ನು ಡಿ.24ರವರೆಗೆ ವಿಸ್ತರಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಬಿಎಂಪಿಯಿಂದ ಹೊರತಾದ ಇಬ್ಬರು ವಿಶೇಷಾಧಿಕಾರಿಗಳ ನೇಮಿಸಬೇಕು, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅನಧಿಕೃತವಾಗಿ ಅಥವಾ ಪರೋಕ್ಷವಾಗಿ ದಾಖಲೆ ಸಂಗ್ರಹಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್, ಹೊಸಬರ ಸೇರ್ಪಡೆ ಕುರಿತು ಸಂಪೂರ್ಣ ತನಿಖೆಗೆ ಮೂವರು ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚಿಕ್ಕಪೇಟೆಗೆ  ವಿಶಾಲ್, ಶಿವಾಜಿನಗರ ಕ್ಷೇತ್ರಕ್ಕೆ  ಪ್ರಿಯಾಂಕಾ ಮೇರೆ ಹಾಗೂ ಮಹದೇವಪುರಕ್ಕೆ ಅಜಯ್ ನಾಗಭೂಷಣ್ ಅವರನ್ನು ನೇಮಿಸಲಾಗಿದೆ. 

SCROLL FOR NEXT