ಸಚಿವರಾದ ಅಶ್ವತ್ಥ ನಾರಾಯಣ, ಬಿಸಿ ನಾಗೇಶ್ 
ರಾಜ್ಯ

ಸಿಇಟಿ ಅರ್ಜಿ ತುಂಬುವಲ್ಲಿ ಲೋಪ: ಪದವಿಪೂರ್ವ ಕಾಲೇಜುಗಳಲ್ಲಿ ಸಹಾಯ ಕೇಂದ್ರ ಸ್ಥಾಪನೆ 

ವಿದ್ಯಾರ್ಥಿಗಳು ಯಾವುದೇ ತಪ್ಪಿಲ್ಲದೆ ಸಿಇಟಿ ಅರ್ಜಿ ತುಂಬುವುದನ್ನು ಕಲಿಸಲು ವಿಜ್ಞಾನ ಪಠ್ಯಕ್ರಮವಿರುವ ಪ್ರತಿಯೊಂದು ಪದವಿಪೂರ್ವ ಕಾಲೇಜಿನಲ್ಲೂ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಬೆಂಗಳೂರು: ವಿದ್ಯಾರ್ಥಿಗಳು ಯಾವುದೇ ತಪ್ಪಿಲ್ಲದೆ ಸಿಇಟಿ ಅರ್ಜಿ ತುಂಬುವುದನ್ನು ಕಲಿಸಲು ವಿಜ್ಞಾನ ಪಠ್ಯಕ್ರಮವಿರುವ ಪ್ರತಿಯೊಂದು ಪದವಿಪೂರ್ವ ಕಾಲೇಜಿನಲ್ಲೂ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಸಂಬಂಧವಾಗಿ ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಜತೆ ಸಚಿವರು ಶುಕ್ರವಾರ ಮಹತ್ತ್ವದ ಸಭೆ ನಡೆಸಿದರು.

ನಂತರ ಮಾತನಾಡಿದ ಅಶ್ವತ್ಥನಾರಾಯಣ, ಎಸ್ಸೆಸ್ಸೆಲ್ಸಿ‌ ಹಂತದಲ್ಲಿನ ವಿದ್ಯಾರ್ಥಿ ಸಾಧನೆ ಟ್ರಾಕಿಂಗ್ ವ್ಯವಸ್ಥೆ (ಎಸ್ಎಟಿಎಸ್)ಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಜತೆ ಸಂಯೋಜನೆಗೊಳಿಸುವ ಸಂಬಂಧ ಚರ್ಚಿಸಲಾಯಿತು.  ಎರಡೂ ಇಲಾಖೆಗಳ ಸಮನ್ವಯದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

"ಈಗ ಸಾಕಷ್ಟು ವಿದ್ಯಾರ್ಥಿಗಳು ಸಿಇಟಿ ಅರ್ಜಿಯಲ್ಲಿ ಆರ್.ಡಿ. ಸಂಖ್ಯೆ, ತಂದೆಯ ಹೆಸರು, ಜಾತಿಯ ಹೆಸರು ಇತ್ಯಾದಿಗಳನ್ನು ತಪ್ಪಾಗಿ ದಾಖಲಿಸುತ್ತಿದ್ದಾರೆ. ಇದನ್ನೆಲ್ಲ ಸರಿಪಡಿಸಲು ಏಳೆಂಟು ಬಾರಿ ಅವಕಾಶ ಕೊಡುತ್ತಿದ್ದು, ಇದರಿಂದ ಸಮಯ ವ್ಯರ್ಥವಾಗುತ್ತಿರುವುದರ ಜತೆಗೆ ಉಳಿದ ಪ್ರಕ್ರಿಯೆಗಳು ವಿಳಂಬ ಆಗುತ್ತಿವೆ. ಹೀಗಾಗಿ ಪಿಯುಸಿಯಲ್ಲಿ ಇರುವಾಗಲೇ ಸಿಇಟಿ ಅರ್ಜಿ ತುಂಬಲು ಕಲಿಸುವ ವಿದ್ಯಾರ್ಥಿಸ್ನೇಹಿ ವ್ಯವಸ್ಥೆ ರೂಪಿಸಲಾಗುವುದು ಎಂದರು.

ಇದಕ್ಕಾಗಿ ಪ್ರತಿ ಕಾಲೇಜಿನಲ್ಲೂ ತಲಾ 100 ವಿದ್ಯಾರ್ಥಿಗಳಿಗೆ ಒಬ್ಬ ಪುರುಷ ಮತ್ತು ಓರ್ವ ಮಹಿಳಾ ಉಪನ್ಯಾಸಕರನ್ನ ಸಂಯೋಜಕರನ್ನಾಗಿ ನೇಮಿಸಲಾಗುವುದು. ಇದರ ಜತೆಗೆ ಒಂದು ಜಿಲ್ಲೆಗೆ ತಲಾ ನಾಲ್ವರು ಮಾಸ್ಟರ್ ಟ್ರೈನರ್ ಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು. ಸಂಯೋಜಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ಕೊಡಲಾಗುವುದು. ಹಾಗೆಯೇ ಮಾಸ್ಟರ್ ಟ್ರೈನರ್ ಗಳಿಗೆ ಪ್ರಾಧಿಕಾರದಿಂದ ಪ್ರತ್ಯೇಕವಾಗಿ ತರಬೇತಿ ನೀಡಲಾಗುವುದು ಎಂದು ಅವರು ವಿವರಿಸಿದರು.

ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳಿಗೆ ನಾಲ್ಕು ಹಂತದಲ್ಲಿ ಸಿಇಟಿ ಅರ್ಜಿ ತುಂಬುವುದನ್ನು ಕಲಿಸಲಾಗುವುದು. ಮೊದಲು ಅಗತ್ಯ ಮಾಹಿತಿ ನೀಡುವಿಕೆ, ಎರಡನೇ ಹಂತದಲ್ಲಿ ಮೀಸಲಾತಿ, ಇದಕ್ಕೆ ಅನ್ವಯವಾಗುವ ಆರ್.ಡಿ. ಸಂಖ್ಯೆ, ಶೈಕ್ಷಣಿಕ ವಿದ್ಯಾರ್ಹತೆ ಕುರಿತು ಅರಿವು ಮೂಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಮೀಸಲಾತಿ ಪ್ರಮಾಣ ಪತ್ರಗಳು, ವಿದ್ಯಾರ್ಥಿ ಮತ್ತು ತಂದೆಯ ಹೆಸರುಗಳು ಸರಿಯಾಗಿ ಇರುವ ಬಗ್ಗೆ ಮಾಹಿತಿ ಕೊಡಲಾಗುವುದು ಎಂದು ಸಚಿವರು ವಿವರಿಸಿದರು.

ಜನವರಿಯಲ್ಲಿ ಅರ್ಜಿ ತುಂಬಲು ಅವಕಾಶ, ಫೆಬ್ರವರಿಯಲ್ಲಿ ಸೀಟು ಹಂಚಿಕೆ, ದಾಖಲಾತಿ ಪರಿಶೀಲನೆ ಮತ್ತು ಇತರ ಪ್ರಕ್ರಿಯೆ ಬಗ್ಗೆ ಮನದಟ್ಟು ಮಾಡಿಕೊಡಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿ, ಈಗ ಇರುವ ಎಸ್ಎಟಿ  ವ್ಯವಸ್ಥೆಯಲ್ಲಿ ಲಭ್ಯವಾಗುವ ವಿದ್ಯಾರ್ಥಿ ಸಂಬಂಧಿತ ಮಾಹಿತಿ ಅಥವಾ ವಿವರಗಳನ್ನು ಸಿಇಟಿ ಅರ್ಜಿಯಲ್ಲಿ ವಿಲೀನಗೊಳಿಸಲು ಚಿಂತಿಸಲಾಗುತ್ತಿದೆ ಎಂದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT