ರಾಜ್ಯ

ಬಿಜೆಪಿ ಸಂಸದರ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡ ಸೈಲೆಂಟ್ ಸುನೀಲ!

Vishwanath S

ಬೆಂಗಳೂರು: ನಟೋರಿಯಸ್ ರೌಡಿ ಶೀಟರ್ ಆಗಿದ್ದ ಸೈಲೆಂಟ್ ಸುನೀಲ ಬಿಜೆಪಿ ಸಂಸದರ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. 

ಅಪರಾಧ ಚಟುವಟಿಕೆ ನಡೆಸುತ್ತಿರುವ ಶಂಕೆ ಮೇರೆಗೆ ಕಳೆದ 23ರಂದು ಬೆಂಗಳೂರು ನಗರದ ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ ನಡೆದಾಗ ಸೈಲೆಂಟ್ ಸುನೀಲ ತಲೆಮರೆಸಿಕೊಂಡಿದ್ದನು. ಇದೀಗ ದಿಢೀರ್ ಅಂತ ಚಾಮರಾಜಪೇಟೆಯ ಕಾರ್ಯಕ್ರಮದಲ್ಲಿ ಪ್ರತ್ಯಕ್ಷನಾಗಿದ್ದನು. ಇನ್ನು ಕಣ್ಮುಂದೆ ಇದ್ದರೂ ಸೈಲೆಂಟ್ ಸುನೀಲ ನನ್ನು ಪೊಲೀಸರು ಯಾಕೆ ವಶಕ್ಕೆ ಪಡೆದಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ. 

ನಿನ್ನೆ ಚಾಮರಾಜಪೇಟೆಯಲ್ಲಿ ನಡೆದಿದ್ದ ರಕ್ತದಾನ ಶಿಬಿರದ ನೇತೃತ್ವ ಸೈಲೆಂಟ್ ಸುನೀಲ ವಹಿಸಿದ್ದರು. ಶಿಬಿರದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕರಾದ ಉದಯ್ ಗರುಡಚಾರ್ ಹಾಗೂ ಎನ್ ಆರ್ ರಮೇಶ್ ಭಾಗವಹಿಸಿದ್ದರು. 

ಬಿಜೆಪಿ ಸಂಸದರು, ಶಾಸಕರ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಸೈಲೆಂಟ್ ಸುನೀಲ ರಾಜಕೀಯ ಪ್ರವೇಶಕ್ಕೆ ಎಂಟ್ರಿನ ಎಂಬ ಪ್ರಶ್ನೆಗಳು ಮೂಡಿವೆ. ಇನ್ನು ಸೈಲೆಂಟ್ ಸುನಿಲ್ ಮೇಲೆ ಸದ್ಯಕ್ಕೆ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ. ಅಲ್ಲದೆ ಆತನ ವಿರುದ್ಧ ಯಾವುದೇ ವಾರಂಟ್ ಇಲ್ಲ ಎಂದು ಸಿಸಿಬಿ ಜಂಟಿ ಆಯುಕ್ತರಾದ ಶರಣಪ್ಪ ತಿಳಿಸಿದ್ದಾರೆ.

ರೌಡಿಶೀಟರ್ ಗಳಾದ ಸೈಲೆಂಟ್ ಸುನಿಲ್, ಸೈಕಲ್ ರವಿ, ಮುಲಾಮ, ರೋಹಿತ್ ಸೇರಿ ಹಲವರ ಮೇಲೆ ನಿಗಾ ಇಟ್ಟಿದ್ದೇವೆ. ಯಾರ ಯಾರ ಮೇಲೆ ಕೇಸ್ ಇದೆ ಅದನ್ನು ಗಮದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಶರಣಪ್ಪ ತಿಳಿಸಿದ್ದಾರೆ.

ಕಳೆದ ವಾರ ಸಿಸಿಬಿ ರೌಡಿಗಳ ಮನೆ ಮೇಲೆ ದಾಳಿ ಮಾಡಿತ್ತು. ಈ ವೇಳೆ  ಕೆಲವರು ಮನೆಯಲ್ಲಿ ಇರಲಿಲ್ಲ. ಇದ್ದವರನ್ನು ವಶಕ್ಕೆ ಪಡೆದು ಎಚ್ಚರಿಕೆ ಕೊಡಲಾಗಿದೆ. ನಾಪತ್ತೆಯಾಗಿದ್ದ ಒಂಬತ್ತು ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದರು. 

SCROLL FOR NEXT