ರಾಜ್ಯ

ಮುರುಘಾ ಮಠದ ವಿರುದ್ಧ ಷಡ್ಯಂತ್ರ: ಒಡನಾಡಿ ಸಂಸ್ಥೆಯ ಮುಖಂಡರ ವಿರುದ್ಧ ತನಿಖೆಗೆ ಸಾಮಾಜಿಕ ಕಾರ್ಯಕರ್ತ ಆಗ್ರಹ

Ramyashree GN

ಚಿತ್ರದುರ್ಗ: ಮುರುಘಾ ಮಠಾಧೀಶ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಪೊಕ್ಸೊ ಪ್ರಕರಣದಲ್ಲಿ ಸಿಲುಕಿಸಲು ಒಡನಾಡಿ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಸ್ಟಾನ್ಲಿ ಮತ್ತು ಪರಶು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ಜಿತೇಂದ್ರ ಎನ್ ಹುಲಿಕುಂಟೆ, ಸಂಸ್ಥೆ ಮತ್ತು ಇಬ್ಬರ ವಿರುದ್ಧ ತನಿಖೆ ನಡೆಸಲು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರಿಗೆ ದೂರು ಸಲ್ಲಿಸಿರುವುದಾಗಿ ಭಾನುವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಸ್ಟಾನ್ಲಿ ಮೂರನೇ ಆರೋಪಿಯಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ ಅಥವಾ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿಲ್ಲ. ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮತ್ತು ಬಸವರಾಜೇಂದ್ರ ಸೇರಿದಂತೆ ಡಾ. ಶಿವಮೂರ್ತಿ ಮುರುಘಾ ಶರಣರು ವಿರುದ್ಧ ನಡೆದ ಷಡ್ಯಂತ್ರದಲ್ಲಿ ಸ್ಟಾನ್ಲಿ ಸಮಾನ ಆರೋಪಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇವರಿಬ್ಬರು ಬಾಲಕಿಯರ ಮೇಲೆ ಪ್ರಭಾವ ಬೀರಿ ಆರೋಪಿ ಶ್ರೀಗಳ ವಿರುದ್ಧ ಪ್ರಚೋದಿಸಬಹುದೆಂಬ ಭಯವಿದೆ. ಹೀಗಾಗಿ ನಿಷ್ಪಕ್ಷಪಾತ ತನಿಖೆಗಾಗಿ ಬಾಲಕಿಯರನ್ನು ಒಡನಾಡಿ ಸಂಸ್ಥೆಯಿಂದ ಯಾವುದೇ ಸರ್ಕಾರಿ ಮಹಿಳಾ ಗೃಹಕ್ಕೆ ಸ್ಥಳಾಂತರಿಸಬೇಕು. ಒಡನಾಡಿ ಸಂಸ್ಥೆಯ ವಿರುದ್ಧ ಸುಲಿಗೆ ಪ್ರಕರಣಗಳು ಬಾಕಿ ಉಳಿದಿದ್ದು, ಅವರ ಚಟುವಟಿಕೆಗಳ ಬಗ್ಗೆ ಜನರಿಗೆ ತಿಳಿಸಲು ತನಿಖೆ ನಡೆಸಬೇಕಾಗಿದೆ ಎಂದರು.

3 ಕೋಟಿ ಆಮಿಷ

ಶಿವಮೂರ್ತಿ ಮುರುಘಾ ಶರಣರು ಬೆಂಬಲಿಗರು 3 ಕೋಟಿ ರೂಪಾಯಿ ಆಮಿಷ ಒಡ್ಡಿ, ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ ಎಂದು ಎಂಎಲ್ ಪರಶುರಾಮ್ ಆರೋಪಿಸಿದ್ದು, 'ನಾನು ಪ್ರಕರಣವನ್ನು ಹಿಂಪಡೆಯುವುದಿಲ್ಲ ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹೋರಾಟವನ್ನು ಮುಂದುವರಿಸುತ್ತೇನೆ' ಎಂದು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.

SCROLL FOR NEXT