ರಾಜ್ಯ

'40% ಸರ್ಕಾರ, ಇದೇನಾ ನಿಮ್ಮ ರಸ್ತೆ ಕಾಮಗಾರಿ ಸಚಿವ ಹಾಲಪ್ಪ ಆಚಾರರೇ': ಗ್ರಾಮಸ್ಥರ ಹಿಡಿಶಾಪ!

Sumana Upadhyaya

ಕೊಪ್ಪಳ: ಈ ವರ್ಷ ರಾಜ್ಯಾದ್ಯಂತ ಸಾಕಷ್ಟು ವ್ಯಾಪಕ, ಹಲವು ಜಿಲ್ಲೆಗಳಲ್ಲಿ ಪ್ರವಾಹಪೀಡಿತ ಮಳೆ ಬಿದ್ದು ರಸ್ತೆಗಳೆಲ್ಲಾ ಹೊಂಡ ಗುಂಡಿ ಬಿದ್ದಿರುವುದು ವಾಹನ ಸವಾರರು, ಜನರು ಸಾಕಷ್ಟು ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹೊಂಡಗುಂಡಿ ಅವಾಂತರಕ್ಕೆ ಕೆಲವರು ಪ್ರಾಣ ಕಳೆದುಕೊಂಡಿದ್ದು ಆಗಿದೆ.

ಮಳೆ ನಿಂತ ಮೇಲೆ ರಸ್ತೆ ದುರಸ್ತಿ ಮಾಡುತ್ತೇವೆ, ಗುಣಮಟ್ಟದಲ್ಲಿ ಕಾಮಗಾರಿ ಮಾಡುತ್ತೇವೆ ಎಂದು ರಾಜಕೀಯ ನಾಯಕರು, ಗುತ್ತಿಗೆದಾರರು, ಎಂಜಿನಿಯರ್ ಗಳು ಜನರಿಗೆ ಆಶ್ವಾಸನೆ ಕೊಡುವುದು ಸರ್ವೇಸಾಮಾನ್ಯ, ಆದರೆ ದುರಸ್ತಿಯಾದ ಕೆಲವೇ ದಿನಗಳಲ್ಲಿ, ಸತತ ಮಳೆ ಸುರಿದರೆ ಕೆಲವೇ ದಿನಗಳಲ್ಲಿ ಹಾಕಿದ ಟಾರು ಕಿತ್ತುಕೊಂಡು ಬರುವುದನ್ನು ನೋಡಿದ್ದೇವೆ. 

ಇದು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ದೃಶ್ಯ. ಮಹಿಳಾ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರ ಸ್ವಕ್ಷೇತ್ರ ಕುಕನೂರು ತಾಲ್ಲೂಕಿನ ದುರವಸ್ಥೆ. ಹೊಂಡಗುಂಡಿ ಬಿದ್ದಿದ್ದ ರಸ್ತೆಯನ್ನು ಟಾರು ಹಾಕಿ ದುರಸ್ತೆ ಮಾಡಿದ ಒಂದೇ ದಿನದಲ್ಲಿ ಕಿತ್ತುಬಂದಿದೆ. ಜನರು ಬರಿಗೈಯಿಂದ ಟಾರನ್ನು ಕಿತ್ತುಹಾಕುತ್ತಿದ್ದಾರೆ ಎಂದರೆ ಗುತ್ತಿಗೆದಾರರು, ಎಂಜಿನಿಯರ್ ಗಳು ಯಾವ ಮಟ್ಟದಲ್ಲಿ ಕಾಮಗಾರಿ ಮಾಡಿರಬಹುದು ಎಂದು ಊಹಿಸಬಹುದು. ಈ ರಸ್ತೆಯ ದುರಸ್ತಿಗೆ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗಿದೆ. 

ಆಕ್ರೋಶಗೊಂಡ ಗ್ರಾಮಸ್ಥರು ಶಾಸಕ ಹಾಗೂ ಸಚಿವ ಹಾಲಪ್ಪ ಆಚಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಶಾಸಕ ಜಿ ಸಿ ಚಂದ್ರಶೇಖರ್, ರಸ್ತೆಯನ್ನು ಹಾಗೆಯೇ ಮಡಚಿ ಬೇರೆಡೆ ಸಾಗಿಸಬಹುದು ಎಂದು ತೋರಿಸುವ ಮತ್ತೊಂದು ಇದೇ ರೀತಿಯ ದುರವಸ್ಥೆಯನ್ನು ಹಂಚಿಕೊಂಡು ಇದು ರಾಜ್ಯ ಸರ್ಕಾರದ ಸಾಧನೆ ಎಂದು ಟೀಕಿಸಿದ್ದಾರೆ.

SCROLL FOR NEXT