ರಾಜ್ಯ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ವೇಳಾಪಟ್ಟಿ ಬಿಡುಗಡೆ, ಅ.28ರಂದು ಮತದಾನ

Srinivasamurthy VN

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಇದೇ ಅಕ್ಟೋಬರ್ 28ರಂದು ಮತದಾನ ಮತ್ತು 31ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಈ ಕುರಿತು ರಾಜ್ಯ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು,  ರಾಜ್ಯ ಚುನಾವಣಾ ಆಯೋಗವು ಸಂವಿಧಾನ ಪರಿಚ್ಛೇದ 243ಜೆಡ್ಎರಲ್ಲಿ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಕಾಯ್ದೆ 1976 ರ ಪ್ರಕರಣ 24 ಮತ್ತು ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ (ಚುನಾವಣೆ) ನಿಯಮಗಳು, 1979ರ ನಿಯಮ. 3(1) ರನ್ಮಯ, ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡುಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಹಾಗೂ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಪ್ರಕರಣ 19 ರನ್ವಯ ಮತ್ತು ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 3(1) ರನ್ವಯ ಈ ಆದೇಶದ ಅನುಬಂಧ-1 ರಲ್ಲಿ ಹೆಸರಿಸಲಾದ ನಗರ ಸಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸ್ಥಾನಗಳಿಗೆ ಉಪ ಚುನಾವಣೆಯನ್ನು, ಚುನಾವಣಾ ವೇಳಾಪಟ್ಟಿಯನುಸಾರ ನಡೆಸಲು ಆದೇಶಿಸಲಾಗಿದೆ ಎಂದು ತಿಳಿಸಿದೆ.

ಆಯೋಗ ಹೊರಡಿಸಿರುವ ಚುನಾವಣಾ ವೇಳಾಪಟ್ಟಿ ಅನ್ವಯ 10-10-2022ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ದಿನಾಂಕ  17-10-202 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾ೦ಕವಾಗಿರಲಿದೆ. ಅಂತೆಯೇ ದಿನಾಂಕ 18.10.2022 ರಂದು ನಾಮಪತ್ರಗಳನ್ನು ಪರಿಶೀಲಿಸಲಿದ್ದು, ಉಮೇದುವಾರಿಕೆ ಅಥವಾ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು 20-10-2022 ಕೊನೆಯ ದಿನವಾಗಿರಲಿದೆ.

ಮತದಾನ ಅವಶ್ಯಕವಿದ್ದರೆ, ಮತದಾನವನ್ನು 28.10.2022ರಂದು ನಡೆಸಲು ಆಯೋಗ ಸೂಚಿಸಿದ್ದು, ಅಂದು ಬೆಳಿಗ್ಗೆ 700 ಗ೦ಟೆಯಿಂದ ಸಂಜೆ 5.00 ಗಂಟೆಗಳ ವರೆಗೆಮತದಾನ ನಡೆಸಲು ಸೂಚಿಸಲಾಗಿದೆ. ಅಂತೆಯೇ ಮರು ಮತದಾನ ಅಗತ್ಯವಿದ್ದಲ್ಲಿ ದಿನಾಂಕ 30-10-2022ರಂದು ನಡೆಸಲು ಸೂಚಿಸಲಾಗಿದ್ದು,  ದಿನಾಂಕ 31-10-2022ರಂದು ಮತಎಣಿಕೆ ಕಾರ್ಯ ನಡೆಯಲಿದೆ ಎಂದು ಆಯೋಗ ಮಾಹಿತಿ ನೀಡಿದೆ.
 

SCROLL FOR NEXT