ಮೈಸೂರು ದಸರಾ 
ರಾಜ್ಯ

ಮೈಸೂರು ದಸರಾ 2022: ನಾಡಹಬ್ಬ ದಸರಾ ಜಂಬೂ ಸವಾರಿ ಯಶಸ್ವಿ, ಪಂಜಿನ ಕವಾಯತಿನೊಂದಿಗೆ ವಿದ್ಯುಕ್ತ ತೆರೆ

ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಗೆ ವರ್ಣರಂಜಿತ ತೆರೆಬಿದ್ದಿದ್ದು, ಎರಡು ವರ್ಷ ನಂತರ ಚಿನ್ನದ ಅಂಬಾರಿ ಹಾಗೂ ಜಂಬೂ ಸವಾರಿ ನೋಡಿ ಅಪಾರ ಭಕ್ತರು ಪುನೀತರಾಗಿದ್ದಾರೆ.

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಗೆ ವರ್ಣರಂಜಿತ ತೆರೆಬಿದ್ದಿದ್ದು, ಎರಡು ವರ್ಷ ನಂತರ ಚಿನ್ನದ ಅಂಬಾರಿ ಹಾಗೂ ಜಂಬೂ ಸವಾರಿ ನೋಡಿ ಅಪಾರ ಭಕ್ತರು ಪುನೀತರಾಗಿದ್ದಾರೆ.

ಹೌದು.. ಮೈಸೂರಲ್ಲಿ ವಿಜಯದಶಮಿ ಸಂಭ್ರಮಾಚರಣೆಗೆ ವಿದ್ಯುಕ್ತ ತೆರೆ ಬಿದ್ದಿದ್ದು, ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಆಗಿದ್ದ ಜಂಬೂ ಸವಾರಿ ಕಾರ್ಯಕ್ರಮ ಅರಮನೆ ಆವರಣದಲ್ಲಿ ಸಾಂಪ್ರದಾಯಕವಾಗಿ ಜರುಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಮನೆಯ ಬಲರಾಮ ದ್ವಾರದ ಬಳಿ ಮಧ್ಯಾಹ್ನ 2:36ರಿಂದ 2:50 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ದಸರಾ ಮಹೋತ್ಸವದ ಕೇಂದ್ರ ಬಿಂದು ಜಂಬೂ ಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿಯ ವಿಗ್ರಹವನ್ನು ಅಭಿಮನ್ಯು ಹೊತ್ತಿತ್ತು. ಅಭಿಮನ್ಯು ತನ್ನ ಸಂಗಾತಿಗಳಾದ ಕಾವೇರಿ ಹಾಗೂ ಚೈತ್ರ ಜೊತೆಗೆ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಸಂಜೆ 5:37ಕ್ಕೆ ವಿಶೇಷ ವೇದಿಕೆಗೆ ಆಗಮಿಸಿತ್ತು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. ಇದೇ ವೇಳೆಗೆ 52 ಸೆಕೆಂಡ್‌ಗಳಲ್ಲಿ 21 ಬಾರಿ ಕುಶಾಲತೋಪುಗಳನ್ನು ಅರಮನೆಯ ಹೊರ ಆವರಣದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯವರು ಸಿಡಿಸಿದರು. ಬಳಿಕ ಅಂಬಾರಿ ಆನೆಯು ಪೊಲೀಸ್ ಅಶ್ವದಳ, ಕೆಎಸ್‌ಆರ್‌ಪಿ ಮೌಂಟೇನ್ ಕಂಪನಿ ಬೆಂಗಾವಲಿನಲ್ಲಿ ಸಾಗಿತು. ನೆರೆದಿದ್ದ ಜನರು ಜಂಬೂ ಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡು ಝೇಂಕಾರ ಘೋಷಗಳನ್ನು ಕೂಗಿದರು.

ಈ 120 ಕಲಾ ತಂಡಗಳು ತಮ್ಮ ಭಿನ್ನ ಕಲಾ ಪ್ರದರ್ಶನದ ಮೂಲಕ ನೋಡುಗರ ಗಮನ ಸೆಳೆದರು. ಅಲ್ಲದೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 47 ಸ್ತಬ್ಧಚಿತ್ರಗಳು ಜನರನ್ನು ತನ್ನತ್ತ ಸೆಳೆದವು. ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಚೈತ್ರಾ ಹಾಗೂ ಕಾವೇರಿ, ನಿಶಾನೆ ಆನೆ ಅರ್ಜುನ, ನೌಪತ್ ಆನೆಯಾಗಿ ಮಹೇಂದ್ರ, ಸಾಲಾನೆಯಾಗಿ ಭೀಮ, ಗೋಪಾಲಸ್ವಾಮಿ ಹಾಗೂ ಧನಂಜಯ, ಗೋಪಿ ಆಯ್ಕೆ ಆಗಿದ್ದು, ಎಲ್ಲಾ ಆನೆಗಳಿಗೂ ಗಾಂಭೀರ್ಯದಿಂದ ಬನ್ನಿಮಂಟಪದ ಕಡೆ ಹೆಜ್ಜೆ ಹಾಕಿದವು.

ಮೈಸೂರು ಅರಮನೆ ಕರಿಕಲ್ಲು ತೊಟ್ಟಿಯಲ್ಲಿ ಎರಡು ಜೊತೆ ಜಟ್ಟಿಗಳ ನಡುವೆ ರಕ್ತ ಚಿಮ್ಮಿಸುವ ರೋಮಾಂಚನಕಾರಿ ವಜ್ರಮುಷ್ಠಿ ಕಾಳಗ ನಡೆಯಿತು. ಅರಮನೆಯ ಕಲ್ಯಾಣ ಮಂಟಪದ ಮುಂಭಾಗದ ಕನ್ನಡಿ ತೊಟ್ಟಿ ಆವರಣದಲ್ಲಿ ಕೃತಕವಾಗಿ ಮಟ್ಟಿ ಅಕಾಡವನ್ನು ನಿರ್ಮಿಸಲಾಗಿತ್ತು. ಅಕಾಡದಲ್ಲಿ ಆನೆ ದಂತದಿಂದ ತಯಾರಿಸಿದ 'ವಜ್ರನಖ' ಎಂಬ ಆಯುಧವನ್ನು ಕೈಗಳಲ್ಲಿ ಹಿಡಿದ ಜೆಟ್ಟಿಗಳು ಪರಸ್ಪರ ಕದಾಟಕ್ಕಿಳಿದರು. ಎದುರಾಳಿ ಜಟ್ಟಿಯ ತಲೆಯಿಂದ ರಕ್ತ ಬಂದ ಕೂಡಲೇ ಕಾಳಗ ಕೊನೆಗೊಂಡಿತು. ರಕ್ತ ಬಂದವರು ಸೋತರೆ ಅದಕ್ಕೆ ಕಾರಣರಾದವರು ಮೇಲುಗೈ ಸಾಧಿಸಿದರು. ಬಳಿಕ ಸೋತು ಗೆದ್ದವರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕೈಮುಗಿದು ನಿಂತು ಸ್ವಾಮಿ ನಿಷ್ಠೆ ಪ್ರದರ್ಶಿಸಿದರು.

ಮನಸೂರೆಗೊಂಡ ಡ್ರೋನ್ ಪ್ರದರ್ಶನ, ಪಂಜಿನ ಕವಾಯತು
ಜಂಬೂ ಸವಾರಿ ಮುಗಿಯುತ್ತಿದ್ದಂತೆ ಇತ್ತ ಬನ್ನಿಮಂಟಪದ ಮೈದಾನದಲ್ಲಿ ನಡೆದ ಪಂಜಿನ ಕವಾಯತು ನೋಡುಗರನ್ನು ಆಕರ್ಷಿಸಿತು. ಪ್ರತಿ ವರ್ಷದಂತೆ ಅಶ್ವಾರೋಹಿ ಪಡೆಯಿಂದ ನಡೆದ ಪೊಲೀಸರ ಟೆಂಟ್ ಪೆಗ್ಗಿಂಗ್ ನೆರೆದಿದ್ದವರ ಎದೆ ಝಲ್ ಎನಿಸುವಂತೆ ಮಾಡಿದೆ. ಇದೇ ಮೊದಲ ಬಾರಿಗೆ ಪ್ರದರ್ಶನಗೊಂಡ ಡ್ರೋನ್ ಲೈಟ್ ಶೋ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಜನರು ಸತತ 15 ನಿಮಿಷಗಳ ಕಾಲ ಡ್ರೋನ್ ಸೃಷ್ಟಿಸಿದ ಕಲಾಕೃತಿಗಳನ್ನು ವೀಕ್ಷಿಸಿ ಖುಷಿಪಟ್ಟರು. 

ದಸರೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಡ್ರೋನ್ ಲೈಟ್ ಶೋ ಪಂಜಿನ ಕವಾಯತಿಗೆ ಮತ್ತಷ್ಟು ಮೆರುಗು ಹೆಚ್ಚಿಸಿತು. ಹೊಸ ಬೆಳಕಿನ ಲೋಕವೇ ಇಡೀ ಮೈದಾನದಲ್ಲಿ ತುಂಬಿಕೊಂಡಿತ್ತು. ಮೌಂಟೆಡ್ ಪೊಲೀಸರು 15 ನಿಮಿಷ ಪ್ರಸ್ತುತಪಡಿಸಿದ ಟೆಂಟ್ ಪೆಗ್ಗಿಂಗ್ ರೋಚಕ ಅನುಭವ ನೀಡಿತು. ಆರು ಅಡಿ ಕುದುರೆಗಳ ಮೇಲೆ ಕುಳಿತು ಕೆಳಗೆ ನೆಟ್ಟಿದ್ದ ಉರಿಯುವ ಪಂಜುಗಳನ್ನು ಈಟಿಯಲ್ಲಿ ಕಿತ್ತುಕೊಂಡ ಚಾಕಚಕ್ಯತೆಯನ್ನು ನೋಡಿದ ಪ್ರೇಕ್ಷಕರು ರೋಮಾಂಚನಗೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT