ರಾಜ್ಯ

ಚಿಕ್ಕಮಗಳೂರು: ದಲಿತ ಕಾರ್ಮಿಕರಿಗೆ ಗೃಹ ಬಂಧನ, ಗರ್ಭಿಣಿ ಮೇಲೆ ಹಲ್ಲೆ; ಬಿಜೆಪಿ ಮುಖಂಡನ ವಿರುದ್ಧ ಕೇಸ್ ದಾಖಲು

Lingaraj Badiger

ಚಿಕ್ಕಮಗಳೂರು: ದಲಿತ ಕುಟುಂಬದ ಹಲವು ಸದಸ್ಯರನ್ನು ಗೃಹಬಂಧನದಲ್ಲಿಟ್ಟು, ಗರ್ಭಿಣಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕಾಫಿ ಎಸ್ಟೇಟ್ ಮಾಲೀಕ, ಬಿಜೆಪಿ ಮುಖಂಡ ಜಗದೀಶ್ ಗೌಡ ಮತ್ತು ಆತನ ಪುತ್ರನ ವಿರುದ್ಧ ಬಾಳೆಹೊನ್ನೂರು ಪೊಲೀಸರು ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಜಗದೀಶ್ ಗೌಡ ಮತ್ತು ಆತನ ಪುತ್ರ ತಿಲಕ್ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಪರಿಣಾಮ ಆ ಮಹಿಳೆಗೆ ಗರ್ಭಪಾತವಾಗಿದೆ ಎನ್ನಲಾಗಿದೆ. 6 ದಲಿತ ಕುಟುಂಬದ 14 ಕಾರ್ಮಿಕರನ್ನು ಮನೆಯೊಳಗೆ ಬೀಗ ಹಾಕಿ ಕೂಡಿ ಹಾಕಲಾಗಿದೆ. ಅಲ್ಲದೆ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಹೇಳಲಾದ ವೀಡಿಯೊ ವೈರಲ್ ಆದ ನಂತರ ಅವರ ಕೇಸ್ ದಾಖಲಿಸಲಾಗಿದೆ. ಜಗದೀಶ್ ಗೌಡ ಬಿಜೆಪಿ ಮುಖಂಡ ಎಂದು ಕಾಂಗ್ರೆಸ್ ಆರೋಪಿಸಿದೆ.

ಬಾಳೆಹೊನ್ನೂರು ಸಮೀಪದ ಹುಣಸೆಹಳ್ಳಿ ಪುರ ಗ್ರಾಮದಲ್ಲಿ ಅಕ್ಟೋಬರ್ 8 ರಂದು ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಮೂಡಿಗೆರೆ ತಾಲೂಕಿನಿಂದ ಬಂದಿರುವ ದಲಿತ ಕುಟುಂಬಗಳು ಜಗದೀಶ್ ಗೌಡರಿಂದ 9 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಕಳೆದ ನಾಲ್ಕು ತಿಂಗಳಿಂದ ಅವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

"ವೈರಲ್ ಆಗಿರುವ ವೀಡಿಯೊವನ್ನು ಆಧರಿಸಿ ನಾವು ಪ್ರಕರಣವನ್ನು ದಾಖಲಿಸಿದ್ದೇವೆ. ನಾವು ತನಿಖೆಯನ್ನು ಕೈಗೆತ್ತಿಕೊಂಡಿದ್ದೇವೆ. ತನಿಖೆಯ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು" ಎಂದು ಅವರು ಹೇಳಿದ್ದಾರೆ.

ದೂರಿನ ಪ್ರಕಾರ, ಜಗದೀಶ್ ಗೌಡ ಅವರು ಗರ್ಭಿಣಿ ಅರ್ಪಿತಾ ಅವರ ಹೊಟ್ಟೆಗೆ ಹೊಡೆದಿದ್ದಾರೆ ಮತ್ತು ಅರ್ಪಿತಾ ಅವರನ್ನು ರಕ್ಷಿಸಲು ಪ್ರಯತ್ನಿಸಿದಾಗ ಇತರ ಇಬ್ಬರು ಮಹಿಳೆಯರಾದ ರೂಪ ಮತ್ತು ಕವಿತಾ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಜಗದೀಶ್ ಗೌಡ ಮತ್ತು ತಿಲಕ್ ತನ್ನ ಮತ್ತು ಪತಿ ವಿಜಯ್ ಮೇಲೆ ಹಲ್ಲೆ ನಡೆಸಿ ಫೋನ್ ಕಸಿದುಕೊಂಡಿದ್ದಾರೆ ಎಂದು ಅರ್ಪಿತಾ ದೂರಿನಲ್ಲಿ ಆರೋಪಿಸಿದ್ದಾರೆ.

ಜಗದೀಶ್ ಗೌಡ ಮತ್ತು ಅವರ ಮಗ ದಲಿತ ಕಾರ್ಮಿಕರನ್ನು ಮನೆಯೊಳಗೆ ಬೀಗ ಹಾಕಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. 

ದೂರಿನ ಆಧಾರದ ಮೇಲೆ ಪೊಲೀಸರು ಜಗದೀಶ್ ಗೌಡ ಮತ್ತು ತಿಲಕ್ ವಿರುದ್ಧ ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇದೇ ವೇಳೆ ಅರ್ಪಿತಾ ಅವರನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

SCROLL FOR NEXT