ರಾಜ್ಯ

ಮೈಸೂರು: ಅರಣ್ಯ ಇಲಾಖೆ ಅಧಿಕಾರಿಗಳ ವಶದಲ್ಲಿದ್ದ ಬುಡಕಟ್ಟು ಜನಾಂಗದ ವ್ಯಕ್ತಿ ಸಾವು: ಹಿಂಸೆ ಕೊಟ್ಟು ಕೊಂದಿರುವ ಆರೋಪ

Sumana Upadhyaya

ಮೈಸೂರು: ಅರಣ್ಯ ಇಲಾಖೆ ಸಿಬ್ಬಂದಿ ಮತ್ತುಪ ಅಧಿಕಾರಿಗಳ ಕಸ್ಟಡಿಯಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರ ಸಾವು ಮೈಸೂರು ಜಿಲ್ಲೆಯಲ್ಲಿ ತಲ್ಲಣ ಉಂಟುಮಾಡಿದೆ. ಮೃತ ವ್ಯಕ್ತಿಯನ್ನು ಕಾರಿಯಪ್ಪ ಎಂದು ಗುರುತಿಸಲಾಗಿದ್ದು ಹೆಚ್ ಡಿ ಕೋಟೆ ತಾಲ್ಲೂಕಿನ ಎನ್ ಬೇಗೂರು ಗ್ರಾಮ ಪಂಚಾಯತ್ ಸರಹದ್ದಿನ ಹೊಸಹಳ್ಳಿ ನಿವಾಸಿಯಾಗಿದ್ದಾರೆ. 

ಜಿಂಕೆ ಮಾಂಸ ಹೊಂದಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು 49 ವರ್ಷದ ಕಾರಿಯಪ್ಪನನ್ನು ಬಂಧಿಸಿದ್ದರು. ಸಿಬ್ಬಂದಿಯ ಕಿರುಕುಳ ಮತ್ತು ಹಿಂಸೆಯಿಂದ ಕಾರಿಯಪ್ಪ ನಿಧನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. 

ಆದರೆ ಕಾರಿಯಪ್ಪ ಕಾಯಿಲೆಯಿಂದ ತೀವ್ರ ಬಳಲುತ್ತಿದ್ದರು, ಹೀಗಾಗಿ ಅಸುನೀಗಿದ್ದಾರೆಯೇ ಹೊರತು ತಮ್ಮಿಂದಾಗಿ ಸತ್ತಿದ್ದಲ್ಲ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಮೊನ್ನೆ 10ನೇ ತಾರೀಕಿನಂದು ಜಿಂಕೆ ಮಾಂಸ ಹೊಂದಿದ್ದ, ಜಿಂಕೆ ಬೇಟೆಯಾಡಿದ್ದ ಆರೋಪದ ಮೇಲೆ ಕಾರಿಯಪ್ಪನನ್ನು ಬಂಧಿಸಿ ಕರೆದೊಯ್ಯಲಾಗಿತ್ತು. ಬೇಟೆ ವಿರೋಧಿ ತಾಣದಲ್ಲಿ ಆತನನ್ನು ಇರಿಸಲಾಗಿತ್ತು.

ನಿನ್ನೆ ತೀವ್ರ ಅಸ್ವಸ್ಥಕ್ಕೀಡಾಗಿದ್ದ ಕಾರಿಯಪ್ಪನನ್ನು ಕೆ ಆರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮೃತಪಟ್ಟರು. ಆತನಿಗೆ ತೀವ್ರ ಅನಾರೋಗ್ಯ ಸಮಸ್ಯೆಗಳಿದ್ದವು ಎಂದು ಗುಂಡ್ರೆ ಅರಣ್ಯ ವಲಯಾಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಕಾರಿಯಪ್ಪನ ಸಮುದಾಯದ ಜನರು ಮತ್ತು ಕಾರ್ಯಕರ್ತರು ಆತನನ್ನು ತೀವ್ರವಾಗಿ ಹೊಡೆದಿದ್ದರು, ಇದರಿಂದ ಬಳಲಿ ಮೃತಪಟ್ಟಿದ್ದಾನೆ ಎನ್ನುತ್ತಾರೆ.

ಕಾರಿಯಪ್ಪನ ದೇಹದ ಗುರುತುಗಳೇ ಅರಣ್ಯ ಇಲಾಖೆ ಸಿಬ್ಬಂದಿ ಹೊಡೆದು ಸಾಯಿಸಿದ್ದಾರೆ ಎಂದು ತೋರಿಸುತ್ತದೆ ಎಂದು ಕುಟುಂಬದ ಒಬ್ಬ ಸದಸ್ಯರು ಹೇಳಿದರೆ ರಮ್ಯ ಎಂಬ ಮತ್ತೊಬ್ಬ ಸಂಬಂಧಿ, ಐವರು ಅರಣ್ಯಪಾಲಕರು ತಮ್ಮ ಮನೆಯ ಹತ್ತಿರ ಬಂದು ಕಾರಿಯಪ್ಪನನ್ನು ಕರೆದುಕೊಂಡು ಹೋಗಿದ್ದನ್ನು ನೋಡಿದ್ದೇನೆ ಎನ್ನುತ್ತಾರೆ. ಈಗ ಹಠತ್ತಾಗಿ ಕಾರಿಯಪ್ಪ ಇನ್ನಿಲ್ಲ ಎನ್ನುತ್ತಿದ್ದಾರೆ, ಏನಿದರ ಅರ್ಥ ಎಂದು ರಮ್ಯ ಕಣ್ಣೀರು ಹಾಕಿದರು.

ಮೈಸೂರಿನ ಬೈಲಕುಪ್ಪೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತೊಬ್ಬ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಹಲ್ಲೆ ಮಾಡಿ ಕೊಂದ ಪ್ರಕರಣ ಇನ್ನೂ ಹಚ್ಚಹಸರಾಗಿರುವಾಗಲೇ ಮತ್ತೊಂದು ಇಂತಹ ಘಟನೆ ನಡೆದಿರುವುದು ತಲೆತಗ್ಗಿಸುವ ವಿಚಾರ.

ವನ್ಯಜೀವಿಗಳು ಕಣ್ಮರೆಯಾದಾಗ ನಮ್ಮ ಬಳಿ ಬಂದು ನಮಗೆ ಬೆದರಿಕೆ ಹಾಕಿ ಕರೆದುಕೊಂಡು ಹೋಗಿ ಹಿಂಸೆ ಕೊಡುತ್ತಾರೆ.ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ ಎಂದು ಬ್ರಹ್ಮಗಿರಿ ಬುಡಕಟ್ಟು ಸಮುದಾಯದ ವ್ಯಕ್ತಿ ಸುರೇಶ್ ಎಂಬುವವರು ಹೇಳುತ್ತಾರೆ. ಕಾರಿಯಪ್ಪನ ಮನೆಯವರು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಹೇಳುತ್ತಿದ್ದರೂ ತಮಗೆ ಯಾವುದೇ ದೂರು ಬಂದಿಲ್ಲ ಎಂದು ಎಸ್ಪಿ ಆರ್ ಚೇತನ್ ಹೇಳುತ್ತಾರೆ.

SCROLL FOR NEXT